ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಕಿಡಿಗೇಡಿಗಳು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ, ತಕ್ಷಣವೇ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
ನಂದಗಡ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಕೆಲ ಕಿಡಿಗೇಡಿಗಳು ಅವಮಾನ ಮಾಡಿರುವುದನ್ನು ಖಂಡಿಸಿ ನಂದಗಡ ಕ್ರಾಸ್ನಿಂದ ಮೆರವಣಿಗೆ ಮೂಲಕ ಅಂಬೇಡ್ಕರ್ ವೃತ್ತದ ಬಳಿ ಬಂದು ಟಯರ್ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಈ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ಕೊಟ್ಟ ವಿಶ್ವಜ್ಞಾನಿ ಅಂಬೇಡ್ಕರ್ ಅವರ ಬಗ್ಗೆ ಇಡೀ ಜಗತ್ತೇ ಗೌರವದಿಂದ ನೋಡುತ್ತದೆ. ಆದ್ರೆ, ಪದೇ ಪದೆ ನಮ್ಮ ದೇಶದಲ್ಲಿಯೇ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಆಗುತ್ತಿರುವುದು ಅತ್ಯಂತ ಖಂಡನೀಯ. ಕೂಡಲೇ ಆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದೇ ಹೋದ್ರೆ ದೇಶಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂಜಾಗ್ರತಾ ಕ್ರಮವಾಗಿ ಖಾನಾಪಪುರ ಸಿಪಿಐ ಸುರೇಶ್ ಶಿಂಗೆ, ಖಾನಾಪೂರ ಪಿಎಸ್ಐ ಬಸನಗೌಡ ಪಾಟೀಲ್, ನಂದಗಡ ಪಿಎಸ್ಐ ಯು.ಟಿ.ಅವಟಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.