ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ವಿಜಯನಗರ ರಾಜಧಾನಿ ಆಗುತ್ತೆ ಎಂಬ ಸಚಿವ ಆನಂದ್ ಸಿಂಗ್ ಹೇಳಿಕೆ ವಿಚಾರಕ್ಕೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆನಂದ್ ಸಿಂಗ್ ಅವರ ಕಿವಿ ಹಿಂಡಿ ಬುದ್ದಿ ಹೇಳಬೇಕು ಎಂದರು.
ಆನಂದ್ ಸಿಂಗ್ ಹೇಳಿಕೆ ದುರದೃಷ್ಟಕರ. ಈ ರೀತಿ ಹೇಳಿಕೆ ನೀಡುವ ಸಚಿವರಿಗೆ ಕರ್ನಾಟಕ ಏಕೀಕರಣದ ಕಲ್ಪನೆ ಇಲ್ಲ. ಹಂಚಿಹೋಗಿದ್ದ ಕರ್ನಾಟಕ ಪ್ರದೇಶ ಹೇಗೆ ಒಂದಾಯ್ತು ಎಂಬುದೇ ಗೊತ್ತಿಲ್ಲ. 19ನೇ ಶತಮಾನದ ಆರಂಭದಿಂದ ನಮ್ಮ ಹಿರಿಯರು ಹೋರಾಟ ಮಾಡಿ 1956ರಲ್ಲಿ ಕನಸು ನನಸು ಮಾಡಿಕೊಂಡರು. ಸಚಿವರಿಗೆ ಈ ಹೋರಾಟದ ಪರಿಕಲ್ಪನೆಯೇ ಇಲ್ಲ ಎಂದರು.
ಈ ಹಿಂದೆ ದಿ.ಉಮೇಶ್ ಕತ್ತಿ ಅವರಿಂದ ಸಾಕಷ್ಟು ವಾದ-ವಿವಾದ ಆಗಿತ್ತು. ಅಖಂಡ ಕರ್ನಾಟಕದ ಕಲ್ಪನೆ ಇದ್ದವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಗ್ಗೆ ಮಾತನಾಡಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡೋದಾದ್ರೆ ಸಚಿವ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಡಿ. ಈ ವಿಷಯದಲ್ಲಿ ಹತ್ತು ಶಾಸಕರಾದರೂ ನಿಮಗೆ ಬೆಂಬಲ ಕೊಡ್ತಾರಾ ನೋಡೋಣ. ಅದೇ ವಿಚಾರದಲ್ಲಿ ಮತ್ತೊಮ್ಮೆ ಚುನಾವಣೆಗೆ ಆರಿಸಿ ಬನ್ನಿ ಎಂದು ಅಶೋಕ್ ಚಂದರಗಿ ಸವಾಲು ಹಾಕಿದರು.
ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣ: ತನಿಖೆಗೆ 12 ಕೆಎಎಸ್ ಅಧಿಕಾರಿಗಳ ನೇಮಕ