ಬೆಳಗಾವಿ: ಪ್ರಸ್ತುತ ಸಂದರ್ಭದಲ್ಲಿ ಜ್ಞಾನ, ಅಗತ್ಯ ಕೌಶಲ್ಯಗಳೊಂದಿಗೆ ಪದವಿ ಪಡೆದುಕೊಳ್ಳುತ್ತಿರುವ ಯುವ ಸಮುದಾಯ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಕಾಲ ಬಂದಿದೆ. ಕಠಿಣ ಪರಿಶ್ರಮ ಮತ್ತು ಜಾಣ್ಮೆಯಿಂದ ಕಾರ್ಯನಿರ್ವಹಿಸುವ ಮೂಲಕ ತಮ್ಮ ಪಾಲಕರು, ಸಮಾಜ ಹಾಗೂ ಮಾತೃಭೂಮಿ ಹೆಮ್ಮೆಪಡುವಂತಹ ಸಾಧನೆ ಮಾಡಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಜೀರಗೆ ಸಭಾಭವನದಲ್ಲಿ ಇಂದು ನಡೆದ ಕೆ.ಎಲ್.ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ ಸಂಸ್ಥೆಯ 9ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ವೈದ್ಯಕೀಯ ಪದವಿ ಪಡೆದು ವೃತ್ತಿ ಆರಂಭಿಸಲಿರುವ ಯುವಸಮುದಾಯ ಸಮಾಜದಲ್ಲಿ ತುಳಿತಕ್ಕೊಳಗಾದ ಜನರಿಗೆ ಅತ್ಯಂತ ಸಹಾನುಭೂತಿಯಿಂದ ಚಿಕಿತ್ಸೆ ನೀಡಬೇಕು. ಅತ್ಯಂತ ಪವಿತ್ರವಾದ ವೈದ್ಯಕೀಯ ವೃತ್ತಿಯನ್ನು ಹಣ ಗಳಿಕೆಯ ಬದಲಾಗಿ ಸಾರ್ವಜನಿಕರ ಸೇವೆಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಅತ್ಯುತ್ತಮ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ, ಸೌಲಭ್ಯಗಳು ಸಮಾಜದ ಕಟ್ಟಕಡೆಯ ಸಾಮಾನ್ಯ ವ್ಯಕ್ತಿಗೂ ಕೈಗೆಟುಕುವಂತೆ ಒದಗಿಸಬೇಕು. ಅದೇ ರೀತಿ ವೈದ್ಯಕೀಯ ಕ್ಷೇತ್ರದಲ್ಲಿನ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶಕ್ಕೂ ತಲುಪಿಸುವ ಸವಾಲು ನಮ್ಮ ಮುಂದಿದೆ. ಇದನ್ನು ಯುವ ವೈದ್ಯರು ಆದ್ಯತೆಯ ಮೇರೆಗೆ ಒದಗಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಖಾಸಗಿ ಸಂಸ್ಥೆಗಳು ಕೂಡ ಇದರೊಂದಿಗೆ ಕೈಜೋಡಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೌಲಭ್ಯ ಒದಗಿಸಲು ಮುಂದಾಗಬೇಕಿದೆ ಎಂದರು.
ನಮ್ಮ ಭಾಷೆ ನಮ್ಮ ಅಭಿಮಾನ ಆಗಬೇಕು:
ಭಾಷೆ ಮತ್ತು ಭಾವನೆಗಳು ಒಟ್ಟೊಟ್ಟಿಗೆ ಸಾಗುತ್ತವೆ. ಆದ್ದರಿಂದ ಮಾತೃಭಾಷೆ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಇತರೆ ಭಾಷೆಗಳು ಅನಿವಾರ್ಯ. ಆದರೆ, ನಮ್ಮ ಮಾತೃಭಾಷೆ ನಮ್ಮ ಅಭಿಮಾನವಾಗಬೇಕು. ತಂದೆ-ತಾಯಿ, ಮಾತೃಭಾಷೆ, ಮಾತೃಭೂಮಿ ಮತ್ತು ಗುರುಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಕನ್ನಡದಲ್ಲಿಯೇ ಮಾತು ಆರಂಭಿಸಿದ ಉಪರಾಷ್ಟ್ರಪತಿಗಳು, ಸಮಾರಂಭದಲ್ಲಿ ನೆರೆದಿದ್ದ ಗಣ್ಯರು, ವೈದ್ಯಕೀಯ ಪದವೀಧರರು ಹಾಗೂ ಚಿನ್ನದ ಪದಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕೆ.ಎಲ್.ಇ ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಕುಲಪತಿ ಡಾ.ವಿವೇಕ ಸಾವೋಜಿ, ಕುಲಸಚಿವರಾದ ಡಾ.ವಿ.ಡಿ.ಪಾಟೀಲ್ ಹಾಗೂ ವಿವಿಧ ವಿಭಾಗಗಳ ಡೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.