ಚಿಕ್ಕೋಡಿ(ಬೆಳಗಾವಿ): ಕರ್ನಾಟಕದ ಎರಡನೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯ ರಾಜಕಾರಣದಿಂದ ರಾಜ್ಯದಲ್ಲಿ ಏನ್ನೆಲ್ಲಾ ಬದಲಾವಣೆಯಾಗಿವೆ ಎನ್ನುವುದನ್ನು ನೀರಾವರಿ ಸಚಿವ ರಮೇಶ ಜಾರಕಿಹೊಳಿ ಅವರು ಮಾಡಿ ತೋರಿಸಿದ್ದಾರೆ. ಅದರಂತೆ ಈಗ ಮತ್ತೆ ಚಿಕ್ಕೋಡಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಬಿಜೆಪಿಗೆ ಬೆಂಬಲಿಸಲು ಮುಂದಾಗುತ್ತಿದ್ದಾರಾ ಎನ್ನುವ ಮಾತುಗಳು ಚಿಕ್ಕೋಡಿ ಉಪವಿಭಾಗದಲ್ಲಿ ಕೇಳಿ ಬರುತ್ತಿದೆ.
ಬೆಳಗಾವಿ ಮಹಾರಾಷ್ಟ್ರ, ಕರ್ನಾಟಕ ಗಡಿಭಾಗದಲ್ಲಿರುವ ಜಿಲ್ಲೆಯಾದ್ದರಿಂದ ಗಡಿ ವಿವಾದ, ಭಾಷಾ ವಿವಾದ ಹೀಗೆ ಬೇರೆ ರೀತಿಯಿಂದ ಸದ್ದು ಮಾಡುತ್ತಿದ್ದು ಬೆಳಗಾವಿ ಇತ್ತೀಚೆಗೆ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿಯೂ ಬದಲಾಗುತ್ತಿದೆ. ಇತೀಚಿಗಷ್ಟೇ ನಿಧನರಾಗಿರುವ ಸುರೇಶ ಅಂಗಡಿಯಿಂದ ಈ ಲೋಕಸಭಾ ಕ್ಷೇತ್ರಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ. ಈಗಾಗಲೇ ಸೋಲಿಲ್ಲದೆ ನಾಲ್ಕು ಬಾರಿ ಗೆಲುವು ಸಾಧಿಸಿದ ಸುರೇಶ ಅಂಗಡಿ ಈಗ ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎನ್ನುವ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.
ಈಗಾಗಲೇ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರಕ್ಕೆ ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ. ಸುರೇಶ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು, ಕುಟುಂಬಸ್ಥರ ಅಭಿಪ್ರಾಯ ಆಗಿದೆ. ಅಷ್ಟೇ ಯಾಕೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಹಾಗೂ ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಮುತ್ಸದ್ದಿ ಪ್ರಕಾಶ ಹುಕ್ಕೇರಿ ಕೂಡ ಸುರೇಶ ಅಂಗಡಿ ಅವರ ಪತ್ನಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಸ್ಟೇ ಅಲ್ಲದೆ ತಮ್ಮ ಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಕಾರ್ಯಕರ್ತರ ಜೊತೆ ಮಾತನಾಡುವಾಗ ಸುರೇಶ ಅಂಗಡಿ ಅವರ ಪತ್ನಿಗೆ ಟಿಕೆಟ್ ನೀಡಿದರೆ. ನಾನು ಕೂಡ ಪಕ್ಷಾತೀತವಾಗಿ ಅವರ ಪರ ಪ್ರಚಾರ ಮಾಡುತ್ತೇನೆ. ಈ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ಯಾರು ಏನು ಕ್ರಮ ಜರುಗಿಸುತ್ತಾರೆ ಜರುಗಿಸಲಿ ನನಗೂ ಇವರಿಂದ ಸಾಕಾಗಿ ಹೋಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಎರಡು ಪಕ್ಷಗಳು ಸಂಸದರ ಆಯ್ಕೆಗೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲು ಕಸರತ್ತು ನಡೆಸಿದ್ದಾರೆ ಜೊತೆಗೆ ಪ್ರಕಾಶ್ ಹುಕ್ಕೇರಿ ಹೇಳಿಕೆಯಿಂದ ಈಗ ಮತ್ತೆ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಎಲ್ಲವೂ ಸರಿ ಇಲ್ಲಾ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ.
ಪ್ರಕಾಶ ಹುಕ್ಕೇರಿ ಅವರು ಬಿಜೆಪಿ ಒಲವು ಮೊದಲಿನಿಂದಲೂ ಇದೆ. ಹೀಗಾಗಿ ಮುಂದಿನ ದಿನಮಾನಗಳಲ್ಲಿ ಪ್ರಕಾಶ ಹುಕ್ಕೇರಿ ಅವರು ಬಿಜೆಪಿಗೆ ಸೇರಬಹುದು ಎನ್ನುವ ಮಾತುಗಳು ಈಗಾಗಲೇ ಚಿಕ್ಕೋಡಿ ಉಪವಿಭಾಗದಲ್ಲಿ ಕೇಳಿ ಬರುತ್ತಿವೆ.