ಚಿಕ್ಕೋಡಿ: ಪೆಟ್ರೋಲ್ ಮತ್ತು ಡಿಸೇಲ್ ಮಿಶ್ರಿತ ತೈಲ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಂಕ್ ವಿರುದ್ಧ ಆಕ್ರೋಶಗೊಂಡ ವಾಹನ ಸವಾರರು, ಬೈಕ್ ಸ್ಟಾರ್ಟ್ ಆಗದೆ ಪರದಾಡಿದಂತಹ ಘಟನೆ ನಗರದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಕೆಂಪವಾಡ ಗ್ರಾಮದ ಬಂಕ್ನಲ್ಲಿ ಕಳೆದ ಎರಡು ದಿನಗಳಿಂದ ಡಿಸೇಲ್ ಮಿಶ್ರಿತ ಪೆಟ್ರೋಲ್ ನೀಡುತ್ತಿದ್ದು, ತೈಲ ಮಿಶ್ರಿತವಾಗಿದೆ ಎಂದು ಗೊತ್ತಿದ್ದರೂ ಸಹ ಬಂಕ್ ಸಿಬ್ಬಂದಿ ಹಾಗೆಯೇ ಪೆಟ್ರೋಲ್ ಹಾಕುತ್ತಿದ್ದಾರೆ. ದಿನಂಪ್ರತಿ ಈ ಬಂಕ್ನಲ್ಲಿ ಸಾವಿರಾರು ಸವಾರರು ಪೆಟ್ರೋಲ್, ಡಿಸೇಲ್ ತುಂಬಿಸಿಕೊಳ್ಳುತ್ತಾರೆ. ಬಂಕ್ ಮಾಲೀಕರ ಈ ಮೋಸದಿಂದ ಸದ್ಯ ಪರದಾಡುವಂತಾಗಿದೆ ಎಂದು ಬೈಕ್ ಸವಾರರು ಆರೋಪಿಸಿದ್ದಾರೆ.
ಮಿಶ್ರಿತ ತೈಲದ ಪರಿಣಾಮ ಕೆಲವೊಂದು ಬೈಕ್ ಸ್ಟಾರ್ಟ್ ಆಗದೆ ಸವಾರರು ಪರದಾಡುತ್ತಿದ್ದು, ವಾಹನಗಳಿಗೆ ಆಗಿರುವ ತೊಂದರೆಯನ್ನು ಸರಿ ಮಾಡಿಕೊಡಿ ಎಂದು ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಬಂಕ್ ಮಾಲೀಕರನ್ನು ಕರೆಸದೆ ವಾಹನ ಸವಾರರಿಗೆ ಠಾಣೆಗೆ ಬಂದು ದೂರು ನೀಡುವಂತೆ ಹೇಳಿದ್ದಾರೆ ಎನ್ನಲಾಗಿದೆ.