ಬೆಳಗಾವಿ: ರಾಜ್ಯ ಸರ್ಕಾರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ವೇಶನ, ಕಟ್ಟಡ, ಭೂಮಿ ಮತ್ತಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯಿಂದ ಜಿಲ್ಲೆಯ ಮಧ್ಯಮ ವರ್ಗ ತೊಂದರೆ ಅನುಭವಿಸುವಂತೆ ಮಾಡಿದೆ. ಅಲ್ಲದೇ ಆಸ್ತಿ ಖರೀದಿಸಲು ಜನ ಪರದಾಡುವಂತಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಭೀಕರ ಬರಗಾಲದಿಂದ ಕಂಗೆಟ್ಟಿರುವ ಜನರಿಗೆ ಸರ್ಕಾರದ ಈ ನೂತನ ಮಾರ್ಗಸೂಚಿ ದರದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸ್ವಂತ ಮನೆ ಹೊಂದಬೇಕು ಎಂಬ ಮಧ್ಯಮ ವರ್ಗ, ಕೂಲಿಕಾರರ ಕನಸು ಕನಸಾಗಿಯೇ ಉಳಿಯುವಂತೆ ಮಾಡಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಬೆಳಗಾವಿ ನಗರದಲ್ಲಿ ಆಸ್ತಿ ದರ ಗಗನಕ್ಕೇರಿರುವುದರಿಂದ ಜನರು ನಗರದ ಹೊರ ವಲಯದಲ್ಲಿ ನಿವೇಶನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ.
ಜಿಲ್ಲಾ ನೋಂದಣಿ ಅಧಿಕಾರಿ ಮಹಾಂತೇಶ ಪಟಾತರ ಮಾತನಾಡಿ, "ಆಸ್ತಿ ಮಾರುಕಟ್ಟೆ ಮಾರ್ಗಸೂಚಿ ದರವನ್ನು ಕೇಂದ್ರೀಯ ಮಾರುಕಟ್ಟೆ ಉಪಸಮಿತಿ ಎಲ್ಲೆಲ್ಲಿ ಹೆಚ್ಚಳ ಮಾಡಬೇಕೋ ಮಾಡಿದೆ. ಇದು ಜಿಲ್ಲಾದ್ಯಂತ ಅ.1ರಿಂದ ಜಾರಿಗೆ ಬಂದಿದೆ. ಇನ್ನು 2021-22ರ ಸಾಲಿನಲ್ಲಿ 176 ಕೋಟಿ ಟಾರ್ಗೆಟ್ ಇತ್ತು. 186 ಕೋಟಿ ತೆರಿಗೆ ಸಂಗ್ರಹವಾಗಿ, 80 ಸಾವಿರ ಆಸ್ತಿಗಳ ನೋಂದಣಿಯಾಗಿತ್ತು. ಅದೇ ರೀತಿ, 2022-23ರ ಏಪ್ರಿಲ್ ವರೆಗೆ 192 ಕೋಟಿ ತೆರಿಗೆ ಸಂಗ್ರಹವಾಗಿ, 82 ಸಾವಿರ ಆಸ್ತಿಗಳ ನೋಂದಣಿಯಾಗಿದೆ. ದಸ್ತಾವೇಜುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿವೆ" ಎಂದು ತಿಳಿಸಿದರು.
"ಬೆಳಗಾವಿ ನಗರಕ್ಕಿಂತ ಹೊರ ಭಾಗದ ಅನಗೋಳ, ಸಾವಗಾಂವ, ಅಂಬೇವಾಡಿ, ಬಸವನಕುಡಚಿ, ಸಾಂಬ್ರಾ, ಹಲಗಾ, ಬಸ್ತವಾಡ, ಕಂಗ್ರಾಳಿ ಕೆಹೆಚ್ ಸೇರಿ ಮತ್ತಿತರ ಕಡೆ ನಿವೇಶನಗಳು ಹೆಚ್ಚು ನೋಂದಣಿಯಾಗುತ್ತಿವೆ" ಎಂದು ವಿವರಿಸಿದರು.
ನ್ಯಾಯವಾದಿ ಎನ್.ಆರ್.ಲಾತೂರ್ ಮಾತನಾಡಿ, "ರಾಜ್ಯದಲ್ಲಿ ಕಂಡು ಕೇಳರಿಯದ ಭೀಕರ ಬರಗಾಲ ಸ್ಥಿತಿಯಿದೆ. ಕೈಯಲ್ಲಿ ಕೆಲಸವಿಲ್ಲದೇ ಜನ ಕಂಗಾಲಾಗಿದ್ದಾರೆ. ಅಂತಹವುದರಲ್ಲಿ ಆಸ್ತಿ ನೋಂದಣಿ ಶುಲ್ಕ ಹೆಚ್ಚಿಸಿದ್ದು ಸರಿಯಲ್ಲ. ಒಂದು ಜಾಗ ಖರೀದಿಸಿ, ಸ್ವಂತ ಮನೆ ಹೊಂದಬೇಕು ಎಂದು ಅದೆಷ್ಟೋ ವರ್ಷಗಳಿಂದ ದುಡಿದು ಬಡ ಜನರು ಹಣ ಹೊಂದಿಸಿರುತ್ತಾರೆ. ಆದರೆ, ಹೀಗೆ ಶುಲ್ಕ ಹೆಚ್ಚಿಸಿದರೆ ಅವರು ಏನು ಮಾಡಬೇಕು. ತಕ್ಷಣವೇ ಸರ್ಕಾರ ತನ್ನ ನಿರ್ಧಾರ ವಾಪಸ್ ಪಡೆದುಕೊಂಡು ಬಡ ಮತ್ತು ಮಧ್ಯಮ ವರ್ಗಕ್ಕೆ ಅನುಕೂಲ ಮಾಡಿಕೊಡಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವರಿಂದ ಬರ ಪರಿಶೀಲನೆ