ಬೆಳಗಾವಿ : ನಗರದ ಹೊರವಲಯದ ಮಚ್ಛೆ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಮೃತಳಾದ ಗರ್ಭಿಣಿಯ ಅಂತ್ಯಕ್ರಿಯೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಾಳೇನಟ್ಟಿ ಗ್ರಾಮಸ್ಥರು ಗರ್ಭಿಣಿ ರೋಹಿಣಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ಗ್ರಾಮದ ಗಂಗಪ್ಪ ಎಂಬವರ ಪತ್ನಿ ರೋಹಿಣಿ, ಕಳೆದ ವಾರ ಮಚ್ಛೆ ಗ್ರಾಮದಲ್ಲಿರುವ ಸಹೋದರ ಸಂಬಂಧಿ ಮನೆಗೆ ತೆರಳಿದ್ದಳು. ನಿನ್ನೆ ಸಂಜೆ ವಾಕಿಂಗ್‌ಗೆ ಹೋದಾಗ ಕಣ್ಣಿಗೆ ಖಾರಪುಡಿ ಎರಚಿ ರೋಹಿಣಿ ಮತ್ತು ಆಕೆಯ ಸಂಬಂಧಿ ರಾಜಶ್ರೀಯನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದರು.
ಇದನ್ನೂ ಓದಿ : ಬೆಳಗಾವಿಯಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಮಹಿಳೆಯರ ಜೋಡಿ ಕೊಲೆ
ಕೊಲೆಯಾದ ಇಬ್ಬರೂ ಮಹಿಳೆಯರೂ ಕಾಳೇನಟ್ಟಿ ಗ್ರಾಮದ ಸೊಸೆಯಂದಿರಾಗಿದ್ದಾರೆ. ಕೊಲೆಯಾದ ರಾಜಶ್ರೀ ಅಂತ್ಯಕ್ರಿಯೆ ಆಗಿದ್ದು, ರೋಹಿಣಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತವಾಗುತ್ತಿದೆ. ರೋಹಿಣಿ ಗಂಡ ಗಂಗಪ್ಪ ಮೂಲತಃ ಬೇರೆ ಊರಿನವರೆಂದು ಗ್ರಾಮಸ್ಥರು ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ, ರೋಹಿಣಿ ಶವ ಬೆಳಿಗ್ಗೆಯಿಂದ ಕಾಳೇನಟ್ಟಿ ಗ್ರಾಮದ ಹೊರವಲಯದ ರಸ್ತೆಯಲ್ಲೇ ಇಡಲಾಗಿದೆ. ಮಹಿಳೆಯ ಮೃತದೇಹದ ಬಳಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.