ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಂಪುಟದಲ್ಲಿ ಜಿಲ್ಲೆಯ ನಾಲ್ವರು ಸಚಿವರಿದ್ದರೂ ಉಸ್ತುವಾರಿ ಹೊಣೆ ನೀಡಲು ಸಿಎಂ ಮೀನಾಮೇಷ ಎಣಿಸುತ್ತಿದ್ದಾರೆ. ನಾಲ್ವರು ಸಚಿವರಿದ್ದರೂ ಜಿಲ್ಲೆಗೆ ಉಸ್ತುವಾರಿ ಸಚಿವರಿಲ್ಲ ಎಂಬ ಅನಾಥ ಪ್ರಜ್ಞೆ ಜಿಲ್ಲೆಯ ಜನರನ್ನು ಕಾಡುತ್ತಿದೆ.
ಸಿಡಿ ಪ್ರಕರಣದಡಿ ಒಂದೂವರೆ ತಿಂಗಳ ಹಿಂದೆಯೇ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಜೊತೆಗೆ ಬೆಳಗಾವಿ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬೆಳಗಾವಿ ಲೋಕಸಭೆ ಉಪಚುನಾವಣೆ ನಡೆದರೂ ಜಿಲ್ಲೆಯವರಿಗೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿರಲಿಲ್ಲ. ಇದೀಗ ಮಹಾಮಾರಿ ಕೊರೊನಾ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಉಲ್ಭಣಗೊಳ್ಳುತ್ತಿದ್ದು, ಇದರ ನಿಯಂತ್ರಣಕ್ಕೆ ಅಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಲು ಜಿಲ್ಲಾ ಉಸ್ತುವಾರಿ ಸಚಿವರಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣವೂ ಕೈ ಮೀರಿ ಹೋಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ 250ಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ.
ಅಧಿಕಾರಿಗಳಿಗೆ ಮಾಹಿತಿ ಕೊರತೆ:
ಕೊರೊನಾ ಎರಡನೇ ಅಲೆಯ ಮಧ್ಯೆಯೇ ಬೆಳಗಾವಿ ಲೋಕಸಭೆ ಉಪಚುನಾವಣೆ ನಡೆಯಿತು. ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಡಿಸಿಪಿ ಸೇರಿ ಹಲವರನ್ನು ಚುನಾವಣಾ ಆಯೋಗ ವರ್ಗಾವಣೆ ಮಾಡಿ, ಹೊಸಬರನ್ನು ನಿಯೋಜಿಸಿದೆ. ಮೇ 2ಕ್ಕೆ ಫಲಿತಾಂಶ ಹೊರಬರಲಿದ್ದು, ಅಲ್ಲಿಯವರೆಗೆ ಈ ಎಲ್ಲಾ ಅಧಿಕಾರಿಗಳು ಜಿಲ್ಲೆಯಲ್ಲೇ ಇರಬೇಕಾಗಿದೆ. ಚುನಾವಣೆಗೋಸ್ಕರ ಬಂದಿರುವ ಬಹುತೇಕ ಅಧಿಕಾರಿಗಳಿಗೆ ಬೆಳಗಾವಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಕೊರೊನಾ ನಿಯಂತ್ರಣ ತುಸು ಕಷ್ಟವಾಗುತ್ತಿದೆ. ನೆರೆ ರಾಜ್ಯಗಳಿಂದ ರಾಜ್ಯಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಗಳ ಮೇಲಷ್ಟೇ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ. ಆದರೆ ಮಹಾರಾಷ್ಟ್ರ ಹಾಗೂ ಗೋವಾಕ್ಕೆ ತೆರಳಿರುವ ವಲಸೆ ಕಾರ್ಮಿಕರು ಉಪ ರಸ್ತೆಗಳ ಮೂಲಕ ರಾಜ್ಯ ಪ್ರವೇಶಿಸುತ್ತಿದ್ದಾರೆ. ಹೀಗೆ ಬಂದ ಕಾರ್ಮಿಕರಿಂದಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಈ ಕಾರಣಕ್ಕೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ನಿಯಂತ್ರಣ ಅಸಾಧ್ಯವಾಗುತ್ತಿದೆ ಎನ್ನಲಾಗುತ್ತಿದೆ.
ಸಮನ್ವಯತೆಗೆ ಬೇಕಿದೆ ಉಸ್ತುವಾರಿ:
ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ರಾಯಚೂರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಾಗಿದೆ. ಆದರೆ ಆಹಾರ ನಾಗರಿಕ ಮತ್ತು ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಹಾಗೂ ಜವಳಿ ಸಚಿವ ಶ್ರೀಮಂತ ಪಾಟೀಲ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಲಾಗಿಲ್ಲ. ಜೆ.ಹೆಚ್.ಪಾಟೀಲ್ ಹಾಗೂ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಉಮೇಶ್ ಕತ್ತಿ ಬೆಳಗಾವಿ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಅಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಲು ಹಾಗೂ ಸಲಹೆ, ಸೂಚನೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವರ ಅವಶ್ಯಕತೆ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣವೇ ಉಸ್ತುವಾರಿ ಸಚಿವರ ನೇಮಕಕ್ಕೆ ಗಮನ ಹರಿಸಬೇಕು ಎಂಬುವುದು ಸ್ಥಳೀಯರ ಆಗ್ರಹವಾಗಿದೆ.
ಜಾರಕಿಹೊಳಿ ಸಹೋದರರ ಒತ್ತಡ?
ಮೈತ್ರಿ ಸರ್ಕಾರ ಪತನದ ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಉಸ್ತುವಾರಿ ಹೊಣೆ ನೀಡಲಾಗಿತ್ತು. ನಂತರ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ಜವಾಬ್ದಾರಿ ನೀಡಲಾಯಿತು. ಇದೀಗ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದು, ಜಿಲ್ಲೆಯ ನಾಯಕರಿಗೆ ಉಸ್ತುವಾರಿ ನೀಡದಂತೆ ಜಾರಕಿಹೊಳಿ ಸಹೋದರರು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲೆಯ ಬೇರೆ ನಾಯಕರಿಗೆ ಉಸ್ತುವಾರಿ ಜವಾಬ್ದಾರಿ ಸಿಕ್ಕರೆ ಜಾರಕಿಹೊಳಿ ಕುಟುಂಬದ ಪ್ರಭಾವ ಕುಗ್ಗಬಹುದು ಎಂಬ ಆತಂಕ ಸಹೋದರರದ್ದು ಎನ್ನಲಾಗುತ್ತಿದೆ. ಅಗತ್ಯ ಬಿದ್ರೆ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಉಸ್ತುವಾರಿ ನೀಡುವಂತೆ ಸಿಎಂ ಮುಂದೆ ಜಾರಕಿಹೊಳಿ ಸಹೋದರರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಉಸ್ತುವಾರಿ ಸಚಿವರು ಯಾರೇ ಆಗಲಿ, ಕೊರೊನಾ ನಿಯಂತ್ರಿಸಲು ತಕ್ಷಣವೇ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಿಸಬೇಕಿದೆ.