ಬೆಳಗಾವಿ: ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿರುವ ಬೆಳಗಾವಿಯ ಗ್ರಾಮವೊಂದರ ಪರಿಶಿಷ್ಟ ಪಂಗಡದ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದ ಸದಸ್ಯರು ಭೇಟಿ ಮಾಡಿ ಮಾಹಿತಿ ಪಡೆದರು.
ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ಬಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದ ರಾಷ್ಟ್ರೀಯ ಉಪ ನಿರ್ದೇಶಕ ಆರ್.ಕೆ.ದುಬೆ, ಹಿರಿಯ ತನಿಖಾಧಿಕಾರಿ ಅಮೃತಾ ಸೊಳಂಕಿ, ಹಿರಿಯ ಸದಸ್ಯ ರಾಧಾಕಾಂತ ತ್ರಿಪಾಠಿ ನೇತೃತ್ವದ ತಂಡವು ಮಹಿಳೆಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಕಲೆ ಹಾಕಿದರು. ಅಲ್ಲಿಂದ ನೇರವಾಗಿ ಘಟನೆ ನಡೆದ ಗ್ರಾಮಕ್ಕೂ ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗದ ಸದಸ್ಯರು ಭೇಟಿ ನೀಡಿದರು.
ಇದನ್ನೂ ಓದಿ: ಬೆಳಗಾವಿ: ಸಂತ್ರಸ್ತೆಯನ್ನು ಭೇಟಿಯಾದ ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿ
ಬಂಧಿತರ ಸಂಖ್ಯೆ 12ಕ್ಕೆ ಏರಿಕೆ: ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 12ಕ್ಕೇರಿದೆ. ಮಹಿಳೆಯ ಹೇಳಿಕೆ ಮತ್ತು ದೂರಿನ ಪ್ರಕಾರ ಒಟ್ಟು 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಶನಿವಾರ ಆರೋಪಿಗಳಾದ ಸಂತೋಷ ಬಸಪ್ಪ ನಾಯಿಕ, ಶೋಭಾ ರಾಜಪ್ಪ ನಾಯಿಕ, ಲಕ್ಕವ್ವ ಯಲ್ಲಪ್ಪ ನಾಯಿಕ ಅವರನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ಈ ಮೂವರು ತಲೆ ಮರೆಸಿಕೊಂಡಿದ್ದರು.
ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪುತ್ರನ ಪ್ರೇಯಸಿಯ ತಾಯಿ, ತಂದೆ, ಚಿಕ್ಕಪ್ಪ, ಸಹೋದರರು ಸೇರಿದಂತೆ ಒಟ್ಟು 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅದಾದ ಬಳಿಕ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ಇಂದು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಒಟ್ಟು ಇಲ್ಲಿಯವರೆಗೆ 12 ಆರೋಪಿಗಳನ್ನು ಬಂಧಿಸಲಾಗಿದೆ.
ಬಸಪ್ಪ ರುದ್ರಪ್ಪ ನಾಯಿಕ, ರಾಜು ರುದ್ರಪ್ಪ ನಾಯಿಕ, ಕೆಂಪಣ್ಣ ರಾಜು ನಾಯಿಕ, ಪಾರ್ವತಿ ಬಸಪ್ಪ ನಾಯಿಕ, ಯಲ್ಲಪ್ಪ ರುದ್ರಪ್ಪ ನಾಯಿಕ, ಲಕ್ಕಪ್ಪ ರುದ್ರಪ್ಪ ನಾಯಿಕ, ಗಂಗವ್ವ ಬಸಪ್ಪ ವಾಲಿಕಾರ, ಸಂಗೀತಾ ಸದಾಶಿವ ಹೆಗ್ಗನಾಯಿಕ, ಪ್ರದೀಪ ಬಸಪ್ಪ ನಾಯಿಕ, ಸಂತೋಷ ಬಸಪ್ಪ ನಾಯಿಕ, ಶೋಭಾ ರಾಜಪ್ಪ ನಾಯಿಕ, ಲಕ್ಕವ್ವ ಯಲ್ಲಪ್ಪ ನಾಯಿಕ ಅವರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಗೆ ಆಗಮಿಸಿರುವ ಕೇಂದ್ರ ಬಿಜೆಪಿ ಸತ್ಯಶೋಧನಾ ಸಮಿತಿಯು ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಯ ಆರೋಗ್ಯವನ್ನು ವಿಚಾರಿಸಿತು. ಸಂಸದರಾದ ಅಪ್ರಜಿತಾ ಸಾರಂಗಿ, ಸುನಿತಾ ದುಗ್ಗಲ್, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ಅವರನ್ನೊಳಗೊಂಡ ಐದು ಜನರ ಸಮಿತಿ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿದರು. ಘಟನೆಯಿಂದ ಧೃತಿಗೆಡಬೇಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಇದಕ್ಕೂ ಮುನ್ನ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಮಹಿಳೆಯ ಆರೋಗ್ಯವನ್ನು ವಿಚಾರಿಸಿತು.