ಬೆಳಗಾವಿ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸ್ಮಾರ್ಟ್ ಸಿಟಿ ಕೆಲಸಗಳು ನಡೆಯುತ್ತಿರಲಿಲ್ಲ. ಯಡಿಯೂರಪ್ಪ ಸಿಎಂ ಆದ ನಂತರ ಸ್ಮಾರ್ಟ್ ಸಿಟಿ ಕಾಮಗಾರಿಗಳು ವೇಗ ಪಡೆದುಕೊಂಡಿದ್ದು, ಸದ್ಯ ಬೊಮ್ಮಾಯಿ ಸರ್ಕಾರ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಧರ್ಮನಾಥ ಭವನದಲ್ಲಿ ನಡೆದ ಚುನಾವಣೆ ತಯಾರಿ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಪಕ್ಷ ಈ ಬಾರಿಯ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದೆ. ಮೂರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದೊಂದು ವಾರ್ಡ್ಗೆ ಒಬ್ಬೊಬ್ಬ ಶಾಸಕರನ್ನ ಹಾಕುತ್ತೇವೆ. ಮಹಾನಗರ ಪಾಲಿಕೆ ಚುನಾವಣೆ ಮುಗಿಯುವವರೆಗೂ ಯಾವ ಶಾಸಕರು ಬೆಂಗಳೂರಿಗೆ ಹೋಗುವಂತಿಲ್ಲ. ಸಭೆ-ಸಮಾರಂಭಗಳನ್ನು ಮಾಡುವಂತಿಲ್ಲ. ಇಂದು ರಾಜ್ಯಾಧ್ಯಕ್ಷನಾಗಿ ನಾನು ಎಲ್ಲ ಶಾಸಕರಿಗೆ ಸೂಚನೆ ಕೊಡುತ್ತೇನೆ ಎಂದರು.
ಬೆಳಗಾವಿಯಲ್ಲೂ ಬಿಜೆಪಿ ಧ್ವಜ: ಇಪ್ಪತ್ತೈದು ವರ್ಷದ ನಂತರ ಪಕ್ಷ ಚಿಹ್ನೆ ಮೇಲೆ ನಿಲ್ಲುತ್ತಿದೆ. ಒಂದು ವರ್ಷದ ಹಿಂದೆ ಬೆಳಗಾವಿಗೆ ಬಂದಾಗ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಬೇಕು ಅನ್ನುವ ಮಾತಿತ್ತು. ನಿಮ್ಮೆಲ್ಲರ ಮಾತಿನಂತೆ ಇಂದು ಪಕ್ಷದ ಚಿಹ್ನೆಯಡಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದೆ. ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡುವ ನಿರ್ಧಾರ ನಾಯಕರದ್ದಲ್ಲ, ಕಾರ್ಯಕರ್ತರದ್ದು. ಈ ಚುನಾವಣೆ ನಾಯಕರ ಚುನಾವಣೆ ಅಲ್ಲ.
ಬೆಳಗಾವಿ ಕಾರ್ಯಕರ್ತರ ಚುನಾವಣೆ ಆಗಿದ್ದು, ಎಲ್ಲರೂ ಒಗ್ಗೂಡಿ ಚುನಾವಣೆ ಎದುರಿಸುವ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಧ್ವಜ ಹಾರಿಸಿದಂತೆ ಬೆಳಗಾವಿಯಲ್ಲೂ ಬಿಜೆಪಿ ಧ್ವಜ ಹಾರಿಸಲಿದ್ದೇವೆ ಎಂದರು.
ಜ್ಯೋತಿಷ್ಯ ಅಂಗಡಿ ಇಟ್ಟಿದ್ದಾರೆ: ಬಹಳಷ್ಟು ಜನರು, ಮಾಜಿ ಮುಖ್ಯಮಂತ್ರಿಗಳು ಕಾಯ್ತಿದ್ದಾರೆ. ಕಾಂಗ್ರೆಸ್ನಲ್ಲಿ ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಚರ್ಚೆಗಳು ನಡೆಯುತ್ತಿವೆ. ಅದರಲ್ಲಿ ಮಾಜಿ ಮುಖ್ಯಮಂತ್ರಿಗಳು ನಾವು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ನಿಶ್ಚಯ ಮಾಡಿದ್ದಾರೆ. ಅದಕ್ಕಾಗಿ ಈಗಲೇ ಜ್ಯೋತಿಷ್ಯದ ಅಂಗಡಿ ತೆರೆದಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.
ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಸಂದರ್ಭದಿಂದಲೂ ಒಂದು ವರ್ಷದಲ್ಲಿ ಅಧಿಕಾರ ಬೀಳುತ್ತದೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ. ಆದ್ರೆ, ನಾನು ಸಿದ್ದರಾಮಯ್ಯಗೆ ಹೇಳ್ತೇನಿ ಇನ್ನೂ ಇಪ್ಪತ್ತು ವರ್ಷಗಳ ಕಾಲ ಬಿಜೆಪಿ ಅಧಿಕಾರ ನಡೆಸಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಗೆಲ್ಲುವ ಯೋಗ್ಯತೆ ಇಲ್ಲದೇ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಗಲಭೆಗಳನ್ನು ಸೃಷ್ಟಿ ಮಾಡುತ್ತಿದೆ. ಪ್ರಧಾನಿಗಳು ಚರ್ಚೆಗೆ ಬನ್ನಿ ಎಂದರೂ ಕಾಂಗ್ರೆಸ್ ಬರುತ್ತಿಲ್ಲ. ಹೀಗಾಗಿ, ದೇಶದಲ್ಲಿ ಕಾಂಗ್ರೆಸ್ ಪಾರ್ಟಿಯನ್ನು ಜನತೆ ತಿರಸ್ಕಾರ ಮಾಡಿ ಬಿಜೆಪಿಯತ್ತ ಬರುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸ್ಮಾರ್ಟ್ ಸಿಟಿ ಕೆಲಸಗಳು ನಡೆಯುತ್ತಿರಲಿಲ್ಲ. ಯಡಿಯೂರಪ್ಪ ಸಿಎಂ ಆದ ಬಳಿಕ ಸ್ಮಾರ್ಟ್ ಸಿಟಿ ಕಾಮಗಾರಿ ವೇಗ ಪಡೆದುಕೊಂಡಿವೆ. ಇದಲ್ಲದೇ ಸುರೇಶ್ ಅಂಗಡಿ ಸಚಿವರಿದ್ದಾಗ ಬೆಳಗಾವಿಗೆ ಅದ್ಭುತವಾದ ಕೆಲಸಗಳನ್ನು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್ ಅಂಗಡಿ ಅವರನ್ನು ಸ್ಮರಿಸಬೇಕಾಗಿದೆ ಎಂದರು.
ಓದಿ: ಕೆಸರು ಹಾರಿದ್ದಕ್ಕೆ ಕೋಪಗೊಂಡು ಕಾರು ಚಾಲಕನಿಗೆ ಮನಬಂದಂತೆ ಥಳಿತ: ಮೂವರ ಬಂಧನ