ಬೆಳಗಾವಿ: ಫ್ರಾನ್ಸ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ಕಾರ್ಟೂನ್ ಚಿತ್ರಗಳಲ್ಲಿ ಇಸ್ಲಾಂ ಮತ್ತು ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನ ಮಾಡಲಾಗಿದೆ. ಇದನ್ನು ಫ್ರಾನ್ಸ್ ಸರ್ಕಾರ ಬೆಂಬಲಿಸಿದೆ ಎಂದು ಆರೋಪಿಸಿ ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ಮತ್ತು ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯ ಮುಖಂಡರು ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಮತ್ತು ಸೌದಿ ಅರೇಬಿಯಾದ ಇಸ್ಲಾಮಿಕ್ ಸಹಕಾರ ಒಕ್ಕೂಟದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡ ಮುಸ್ಲಿಂ ಸಮುದಾಯದ ಮುಖಂಡರು, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮಕ್ರಾನ್ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಫ್ರೆಂಚ್ ಅಧ್ಯಕ್ಷರ ಹೇಳಿಕೆಯನ್ನು ಇಡೀ ಮುಸ್ಲಿಂ ಸಮುದಾಯ ಖಂಡಿಸುತ್ತದೆ ಎಂದರು.
ಮುಸ್ಲಿಮರು ಮತ್ತು ಪ್ರವಾದಿ ಮಹಮ್ಮದ್ ಅವರನ್ನು ಸ್ವೀಕಾರಾರ್ಹವಲ್ಲದ ಭಾಷೆಯಲ್ಲಿ ಅವಹೇಳನ ಮಾಡಿದ ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯನ್ನು ಶಾಂತಿ ಬಯಸುವ ಯಾವ ದೇಶವೂ ಒಪ್ಪಲು ಸಾಧ್ಯವಿಲ್ಲ. ಎಲ್ಲ ಮುಸ್ಲಿಂ ದೇಶಗಳು ಇಸ್ಲಾಂ ಧರ್ಮದ ಗೌರವ ಮತ್ತು ಘನತೆಯನ್ನು ಕಾಯಲು ಮುಂದಾಗಬೇಕು. ಧರ್ಮ ಧರ್ಮಗಳ ನಡುವೆ ಸೌಹಾರ್ದದ ಸೇತುವೆ ಕಟ್ಟಲು ಜಗತ್ತಿನ ಎಲ್ಲ ಜನಾಂಗಗಳು ಒಂದಾಗಬೇಕಾಗಿದೆ.
ಫ್ರೆಂಚ್ ಪತ್ರಿಕೆಯಲ್ಲಿ ಪ್ರಕಟವಾದ ಅವಹೇಳನಕಾರಿ ಕಾರ್ಟೂನ್‍ಗಳನ್ನು ಬೆಂಬಲಿಸುವ ಫ್ರಾನ್ಸ್ ಸರ್ಕಾರದ ಮನೋಭಾವ ನಮಗೆ ಒಪ್ಪಿಗೆ ಇಲ್ಲ. ಭಾರತದಲ್ಲಿ ಮುಸ್ಲಿಮರೂ ಸೇರಿ ಎಲ್ಲ ಧರ್ಮದವರು ಒಂದಾಗಿ ಬಾಳುತ್ತಿದ್ದಾರೆ. ವೈವಿಧ್ಯತೆಯಲ್ಲಿ ಏಕತೆ ಸಾರುವ ಭಾರತ ದೇಶದಲ್ಲಿ ಸೌಹಾರ್ದ ಭಾವನೆ ಇದೆ. ಈ ಮಾದರಿ ಜಗತ್ತಿನ ದೇಶಗಳಿಗೆ ಆದರ್ಶವಾಗಬೇಕು ಎಂದರು.