ಬೆಳಗಾವಿ: ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್‌ಗಳು ತಾತ್ಕಾಲಿಕ ಸ್ಥಗಿತವಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಮಹಾರಾಷ್ಟ್ರದ ಪುಂಡರು ಇಂದು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದಿದ್ದರು. ಹೀಗಾಗಿ ಕರ್ನಾಟಕದಲ್ಲಿ ಮಹಾರಾಷ್ಟ್ರ ಬಸ್‌ಗಳಿಗೂ ಕಪ್ಪು ಮಸಿ ಬಳಿಯೂ ಭೀತಿ ಹಿನ್ನೆಲೆಯಲ್ಲಿ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಇತ್ತ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿದ್ದ 300ಕ್ಕೂ ಅಧಿಕ ಬಸ್‌ಗಳ ಸಂಚಾರವನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಥಗಿತಗೊಳಿಸಿ ಆದೇಶ ಮಾಡಿದೆ. ಮಹಾರಾಷ್ಟ್ರದಿಂದ ನಿತ್ಯ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ಮಹಾರಾಷ್ಟ್ರ (ಎಮ್‌ಎಸ್‌ಆರ್‌ಟಿಸಿ) ಬಸ್‌ಗಳು ಸಂಚಾರ ಮಾಡುತ್ತವೆ. ಇನ್ನೂ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಎಂದಿನಂತೆ ಕರ್ನಾಟಕ ಸಾರಿಗೆ ಬಸ್‌ಗಳು ತೆರಳುತ್ತಿವೆ.
ಕನ್ನಡಪರ ಹೋರಾಟಗಾರರ ಬೆನ್ನುಬಿದ್ದ ಪೊಲೀಸರು: ಮಹಾರಾಷ್ಟ್ರ ಬಸ್‌ಗಳಿಗೂ ಕಪ್ಪು ಮಸಿ ಬಳಿಯುವ ಭೀತಿ ಹಿನ್ನೆಲೆ ಬೆಳಗಾವಿಯಲ್ಲಿ ಪೊಲೀಸರು ಕನ್ನಡಪರ ಹೋರಾಟಗಾರರ ಬೆನ್ನು ಬಿದ್ದಿದ್ದಲ್ಲದೇ ಮಹಾರಾಷ್ಟ್ರದ ಬಸ್‌ಗಳಿಗೆ ಮಸಿ ಬಳಿಯದಂತೆ ವಾರ್ನಿಂಗ್ ಮಾಡುತ್ತಿದ್ದಾರೆ.
ಎರಡು ರಾಜ್ಯಗಳ ಜನಸಂಚಾರಕ್ಕೆ ಯಾವುದೇ ರೀತಿಯ ನಿರ್ಬಂಧ ಹೆರದಂತೆ ಮತ್ತು ಕಾನೂನು ಕೈಗೆತ್ತಿಕೊಳ್ಳದಂತೆ ತಾಕೀತು ಸಹ ಮಾಡಲಾಗಿದೆ. ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಡಿ ಸೇರಿದಂತೆ ಹಲವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಒಂದಿಂಚು ಭೂಮಿಯನ್ನೂ ಬಿಟ್ಟು ಕೊಡುವುದಿಲ್ಲ: ಏಕನಾಥ್ ಶಿಂಧೆ