ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜೊತೆಗೆ ಶಾಸಕ ಉಮೇಶ್ ಕತ್ತಿ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಸ್ಪಷ್ಟಪಡಿಸಿದರು.
ಸಿಎಂ ಕಾರ್ಯಕ್ರಮಕ್ಕೆ ಉಮೇಶ ಕತ್ತಿ ಗೈರಾದ ಕುರಿತ ಮಾಧ್ಯಮದವರ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಜತೆಗೆ ಉಮೇಶ ಕತ್ತಿ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಸಿಎಂ ಜಿಲ್ಲೆಯ ಪ್ರವಾಸ ಕೈಗೊಂಡಾಗ ಉಮೇಶ ಕತ್ತಿ ಅವರು ವೈಯಕ್ತಿಕ ಕೆಲಸದ ಮೇಲೆ ತೆರಳಿದ್ದರು. ಹೀಗಾಗಿ ಸಿಎಂ ಕಾರ್ಯಕ್ರಮದಲ್ಲಿ ಕತ್ತಿ ಪಾಲ್ಗೊಂಡಿರಲಿಲ್ಲ ಎಂದು ತಿಳಿಸಿದ್ರು.
ನೆರೆ ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಸ್ಪಂದನೆ ಸಿಕ್ಕಿದೆ. ಕೇಂದ್ರದಿಂದ 1,200 ಕೋಟಿ ರೂ ಬಿಡುಗಡೆಯಾಗಿದ್ದು, ಪ್ರವಾಹ ಪುನರ್ವಸತಿ ಕಾರ್ಯಕ್ಕೆ ಮತ್ತಷ್ಟು ಅನುಕೂಲಕರವಾಗಲಿದೆ. ಪರಿಹಾರ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ಅಭಿನಂದಿಸುತ್ತೇನೆ ಎಂದರು.