ಬೆಳಗಾವಿ (ಬೆಂಗಳೂರು): ಡಿಕೆಶಿ ಬೆಂಗಳೂರಲ್ಲಿ ಇದ್ದರೂ ಅಷ್ಟೇ, ತೆಲಂಗಾಣದಲ್ಲಿ ಇದ್ದರೂ ಇಷ್ಟೇ. ಸದನ ಅಂದರೆ ಅವರಿಗೆ ಟೈಂಪಾಸ್ ಎಂದು ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ತೆಲಂಗಾಣ ರಾಜಕೀಯದಲ್ಲಿ ಬ್ಯುಸಿಯಾಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಸದನ ನಡೆಯಬೇಕಾದರೆ ಸಂಪೂರ್ಣ ಗಮನ ಸದನದ ಮೇಲೆ ಇರಬೇಕು. ಇಂದು ಅಧಿಕಾರಕ್ಕೇರಿದ ಅಮಲಿನಲ್ಲಿದ್ದು ಅವರು ಜನ ವಿರೋಧಿಯಾಗಿದ್ದಾರೆ. ಬರ ನಿರ್ವಹಣೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ರೈತರು ಏನು ತಪ್ಪು ಮಾಡಿದ್ದರು? ಅವರ ನೀರಾವರಿ ಕೃಷಿಗೆ ಕರೆಂಟ್ ಇಲ್ಲ. ಬರದ ನಿರ್ವಹಣೆಯೂ ಇಲ್ಲ. ತೀವ್ರ ಬರದಿಂದ ರೈತರು ರೋಸಿಹೋಗಿದ್ದು, ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಶಾಸಕ ಅಶ್ವತ್ಥನಾರಾಯಣ್ ಆರೋಪಿಸಿದರು.
ಗಲೀಜು ಆಲೋಚನೆಯಿಂದ ಹೊರಬನ್ನಿ: ಸಚಿವ ಪ್ರಿಯಾಂಕ್ ಖರ್ಗೆ ಅವರು ಗಲೀಜು ಆಲೋಚನೆಗಳಿಂದ ಹೊರ ಬಂದು ಮಾತಾಡಲಿ. ನೀವು ನೀಡಿರುವ ಸಾವರ್ಕರ್ ಕುರಿತ ಹೇಳಿಕೆ ಸರಿಯಲ್ಲ ಎಂದು ತಿರುಗೇಟು ಕೊಟ್ಟರು.
ನಾನಿದ್ದರೆ ವೀರ್ ಸಾವರ್ಕರ್ ಭಾವಚಿತ್ರ ತೆಗೆದು ಹಾಕುತ್ತಿದ್ದೆನು ಎಂಬ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿಸಿಎಂ ಅಶ್ವತ್ಥನಾರಾಯಣ್, ವೀರ್ ಸಾವರ್ಕರ್ ಗೆ ಅಗೌರವ ತೋರುವುದನ್ನು ಖಂಡಿಸುತ್ತೇನೆ. ಮಾತನಾಡೋದು ನಿಮ್ಮ ಕೆಲಸ. ಕೀಳುಮಟ್ಟದ ಹೇಳಿಕೆ ಬೇಡ. ಇಂತಹ ಹೇಳಿಕೆಯಿಂದ ಆಚೆ ಬನ್ನಿ. ನೀವು ಮಂತ್ರಿಯಾಗಿದ್ದೀರಿ. ನಿಮ್ಮ ಇಲಾಖೆಯನ್ನು ನಡೆಸಿಕೊಂಡು ಹೋಗಿ. ನಿಮ್ಮ ಕೆಲಸ ಮಾತಾಡಬೇಕು. ಇಂಥ ಗೊಂದಲದ ಹೇಳಿಕೆಯನ್ನು ನೀಡಬೇಡಿ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ತರಹ ಹೇಳಿಕೆಗಳನ್ನು ನೀಡಿದರೆ ಸರ್ಕಾರಕ್ಕೆ ಅಗೌರವ ಉಂಟಾಗುತ್ತದೆ ಎಂದರು.
ರೈತ ವಿರೋಧಿ ಸರ್ಕಾರ: ರೈತ ವಿರೋಧಿ ಸರ್ಕಾರ ಅಂದರೆ ಅದು ಕಾಂಗ್ರೆಸ್ ಸರ್ಕಾರ. ರೈತ ಪರ ಯೋಜನೆಗಳನ್ನು ರದ್ದು ಮಾಡಿ, ರೈತರಿಗೆ ವಿದ್ಯುತ್ ನೀಡದೆ, ಬರದಲ್ಲಿ ಪರಿಹಾರ ನೀಡದೇ ರೈತ ವಿರೋಧಿಯಾಗಿದೆ. ಇವರಿಗೆ ಸದನದ ಬಗ್ಗೆ ಕಾಳಜಿ ಇದೆಯಾ, ಎಷ್ಟು ಜನ ಮಂತ್ರಿಗಳಿದ್ದಾರೆ?. ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಇರುತ್ತಾರೆ. ಅವರೀಗ ಅಧಿಕಾರದ ಅಮಲಿನಲ್ಲಿ ಇದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇವರಿಗೆ ಜನ ಪಾಠ ಕಲಿಸ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ: ಎನ್ಇಪಿ ಪ್ರಾರಂಭವಾಗಿದ್ದು 1968. 1978ರಲ್ಲಿ ಶಿಕ್ಷಣವನ್ನು ಕಾನ್ಕರೆಂಟ್ ಲಿಸ್ಟ್ ಗೆ ಹಾಕಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ದೇಶ ಒಂದು ಪಠ್ಯ ಎಂಬ ಪರಿಕಲ್ಪನೆ ಇದೆ. ರಾಷ್ಟ್ರೀಯ ಮಟ್ಟದಲ್ಲಿ ಯುಜಿಸಿ ಇದೆ. ಎಇಸಿಟಿ, ಟೀಚರ್ ಕೌನ್ಸಿಲ್ ಎಲ್ಲವೂ ಇರುವುದು ರಾಷ್ಟ್ರೀಯ ಮಟ್ಟದಲ್ಲಿ. ಹಾಗಾಗಿ ರಾಜ್ಯದಲ್ಲಿ ಪ್ರತ್ಯೇಕವಾಗಿ ಶಿಕ್ಷಣ ನೀತಿ ಮಾಡಲು ಆಗುವುದಿಲ್ಲ ಎಂದು ಅವರು ಹೇಳಿದರು.
ಸಿಎಂಗೆ, ಸಚಿವರಿಗೆ ತಿಳುವಳಿಕೆ ಕೊರತೆ ಇದೆ. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ರಾಜ್ಯದ ಮಕ್ಕಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಸಿಬಿಎಸ್ಇ, ಐಸಿಎಸ್ನಲ್ಲಿ ರಾಜ್ಯ ಶಿಕ್ಷಣ ನೀತಿ ತರಲು ಆಗುತ್ತಾ?. ಖರ್ಗೆಯವರ, ಡಿಕೆಶಿ ಶಾಲೆಗಳಲ್ಲಿ ಎಸ್ ಇಪಿ ಇದೆಯಾ?. ಯಾವುದೇ ಕಾರಣಕ್ಕೂ ಪ್ರತ್ಯೇಕ ಶಿಕ್ಷಣ ನೀತಿ ತರಲು ಆಗಲ್ಲ. ಯುಜಿಸಿ ಮಾನ್ಯತೆ ಇಲ್ಲದೆ ಇವರಿಗೆ ಡಿಗ್ರಿ ಕೊಡಲು ಆಗುತ್ತಾ?. ಎನ್ ಇಪಿ ಪಠ್ಯ ಕ್ರಮ ಅಲ್ಲ. ಅದು ಕಲಿಯೋದು, ಕಲಿಸೋದು. ಇಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಅಶ್ವತ್ಥನಾರಾಯಣ್ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವೆ. ಎನ್ ಇಪಿ ಕೊರತೆ ಏನಿದೆ ಎಂದು ಅವರು ಹೇಳಿಲ್ಲ. ಎನ್ ಇಪಿ ಉತ್ತರ ಪ್ರದೇಶದ ನೀತಿ ಅಂತಾರಲ್ಲ. ಈಗ ಎಸ್ಇಪಿ ಸಮಿತಿಗೆ ಚೇರ್ಮೆನ್ ಮಾಡಿದವರು ಯಾವ ಊರಿನವರು. ಅವರು ಉತ್ತರ ಭಾರತದವರೇ. ಕೇಂದ್ರ ಶಿಕ್ಷಣ ನೀತಿಯನ್ನು ಇವರು ಕೇಳಬೇಕು. ಇದನ್ನು ಪಾಲನೆ ಮಾಡಬೇಕು ಎಂದರು.
ಕಾಂಗ್ರೆಸ್ ಅಂದರೆ ಕೋಮುವಾದಿ: ಸಿಎಂ ಸಿದ್ದರಾಮಯ್ಯನವರಿಗೆ ಕೇಸರಿ ಶಾಲು, ಕೇಸರಿ ಪೇಟ ಹಾಕಿದ್ರೆ ತೆಗೆಯುತ್ತಾರೆ. ಕಾಂಗ್ರೆಸ್ನವರು ಅಂದರೆ ಕೋಮುವಾದಿಗಳು ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ್ ವಾಗ್ದಾಳಿ ನಡೆಸಿದರು.
ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮನಬಂದಂತೆ ಆಡಳಿತ ನಡೆಸುತ್ತಿದೆ. ರೈತರ ಹಿತ ಕಾಪಾಡಲು ವಿಫಲವಾಗಿರುವ ಸರ್ಕಾರದ ನಡೆಯನ್ನು ಬಯಲಿಗೆ ಎಳೆಯುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ನಾವು ಪ್ರಶ್ನೆ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡಲು ಸಹ ನಾವು ಮನವಿ ಮಾಡಿದ್ದೇವೆ ಎಂದರು.
ಎಸ್ಸಿಪಿ, ಟಿಎಸ್ಪಿ 11 ಸಾವಿರ ಕೋಟಿ ಗ್ಯಾರಂಟಿಗೆ ಬಳಕೆ : ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ 11 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತದೆ. ಗ್ಯಾರಂಟಿ ಯೋಜನೆಗೆ ಒಳಪಡುವ ಇಲಾಖೆಗಳಿಗೆ ನೀಡಲು ಅವರಿಗೆ ಹಣ ಇಲ್ಲ. ಬರೀ ನಾಮಕಾವಸ್ಥೆಗೆ ಗ್ಯಾರಂಟಿ ಯೋಜನೆಗಳಿವೆ. ಅಭಿವೃದ್ಧಿ ಅನ್ನುವ ಪದವೇ ಗ್ಯಾರಂಟಿ ಯೋಜನೆ ಕಂಡಿಲ್ಲ ಎಂದು ಅಶ್ವತ್ಥನಾರಾಯಣ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಇದನ್ನೂಓದಿ:ಹಣವಿಲ್ಲದೇ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ: ಆರ್ ಅಶೋಕ್ ವಾಗ್ದಾಳಿ