ಬೆಳಗಾವಿ : ಕುಂದಾನಗರಿ ಜನರ ಬಹು ದಿನಗಳ ಬೇಡಿಕೆಯಾಗಿದ್ದ, ಬೆಳಗಾವಿಯಿಂದ ಬೆಂಗಳೂರು ವರೆಗಿನ ರೈಲು ಸಂಚಾರ ಪ್ರಾರಂಭಿಸಿದ್ದ ಸಚಿವ ಸುರೇಶ್ ಅಂಗಡಿ ಸದ್ಯ ಮತ್ತೊಂದು ಸಂತೋಷದ ಸುದ್ದಿ ನೀಡಿದ್ದಾರೆ.
ಇಂದು ನಗರದ ರೈಲು ನಿಲ್ದಾಣದ ಕಾಮಗಾರಿ ಪರಿಶೀಲನೆ ಮಾಡಿ ಮಾತನಾಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ. ಬರುವ ನವೆಂಬರ್ 1 ರಂದು ಬೆಳಗಾವಿಯಿಂದ ಮೈಸೂರುವರೆಗೆ ಹೊಸ ರೈಲು ಪ್ರಾರಂಭ ಮಾಡಲಾಗುತ್ತದೆ. ಜೊತೆಗೆ ಬೆಳಗಾವಿ -ಬೆಂಗಳೂರು ರೈಲಿಗೆ ಹೊಸ ಬೋಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಜನರ ಬಹಳ ದಿನದ ಬೇಡಿಕೆಯಾಗಿದ್ದ ಕೆಲಸ ಮಾಡಲಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಪ್ರಾರಂಭವಾಗಿದ್ದ ಬೆಳಗಾವಿ-ಬೆಂಗಳೂರು ರೈಲಿಗೆ ಟ್ರಯಲ್ ಆಗಿ ಹಳೆ ಬೋಗಿ ಜೋಡಿಸಲಾಗಿತ್ತು. ಆದರೆ ಈಗ ಹೊಸ ಬೋಗಿಗಳನ್ನು ಜೋಡಿಸಲಾಗುತ್ತದೆ ಎಂದರು.
ಬೆಳಗಾವಿ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣದ ಹಾಗೆ ನಿರ್ಮಾಣ ಮಾಡುವ ಗುರಿ ಇದ್ದು, ಮುಂದಿನ ದೀಪಾವಳಿ ವೇಳೆಗೆ ಹೊಸ ರೈಲು ನಿಲ್ದಾಣ ಕಟ್ಟಡ ಉದ್ಘಾಟನೆ ಆಗಲಿದೆ ಎಂದು ತಿಳಿಸಿದ್ದಾರೆ. ಹೊಸ ರೈಲು ನಿಲ್ದಾಣದಲ್ಲಿ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತದೆ. ಪ್ರಯಾಣಿಕರಿಗೆ ಅನೂಕುಲ ಆಗುವ ರೀತಿಯಲ್ಲಿ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.