ಬೆಳಗಾವಿ: ಗಡಿ ಪ್ರದೇಶದಲ್ಲಿ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆ ಸಂಘಟನೆ ಬ್ಯಾನ್ಗೆ ಕಾನೂನಿನಡಿ ಅವಕಾಶ ಇದ್ದರೆ ಚಿಂತನೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಂದಾಣಿಕೆ ಮಾಡಿಕೊಳ್ಳಲ್ಲ. ನೆಲ-ಜಲ ರಕ್ಷಣೆಗೆ ಯಾವುದೇ ಬೆಲೆ ತೆತ್ತಾದರೂ ಗಡಿ ರಕ್ಷಣೆ ಮಾಡಿಕೊಳ್ಳಲಿದೆ. ಬೆಳಗಾವಿಯಲ್ಲಿ ಶಿವಸೇನೆಯವರ ಪುಂಡಾಟಿಕೆ ನಿಲ್ಲಿಸಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಲಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಯಾರು ಪುಂಡಾಟಿಕೆ ಮಾಡುತ್ತಿದ್ದಾರೆ ಅಂತಹವರನ್ನು ಪೊಲೀಸರು ಮಟ್ಟ ಹಾಕಬೇಕು. ಆಗ ಮಾತ್ರ ಜಿಲ್ಲೆಯಲ್ಲಿ ಶಾಂತಿ ನೆಲಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಾಕಷ್ಟು ಜನರ ಮರಾಠಿಗರಿದ್ದಾರೆ. ಅವರೆಲ್ಲರೂ ಶಾಂತಿ ಬಯಸುತ್ತಿದ್ದು, ಇನ್ನು ಜಿಲ್ಲೆಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆಗೆ ಎಬಿಸಿಡಿಯಿಂದ ಕನ್ನಡ ಅಕ್ಷರ ಮಾಲೆವರೆಗೆ ಪಾಠ ಕಲಿಸಿ ಕೊಡಲಾಗುವುದು. ಎಂಇಎಸ್, ಶಿವಸೇನೆ ಒಂದು ರಾಜಕೀಯ ಪಕ್ಷ ಆಗಿದ್ದರಿಂದ ಬ್ಯಾನ್ ಮಾಡಲು ಬರಲ್ಲ. ಈ ಬಗ್ಗೆ ಕಾನೂನು ಅವಕಾಶ ಇದೆಯೋ ಇಲ್ಲವೋ ಗೊತ್ತಿಲ್ಲ. ಕಾನೂನಿನಲ್ಲಿ ಬ್ಯಾನ್ ಮಾಡುವ ಬಗ್ಗೆ ಅವಕಾಶ ಇದ್ದರೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಳಗಾವಿ ಲೋಕಸಭೆ ಉಪಚುನಾವಣೆ ವಿಚಾರಕ್ಕೆ, ನಿನ್ನೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದೇನೆ. ನಾನು ಕೂಡ ಚುನಾವಣೆ ಕಮಿಟಿಯಲ್ಲಿ ಇರುವುದರಿಂದ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಬೆಳಗಾವಿ ಅಭ್ಯರ್ಥಿ ಯಾರು ಆಗಬೇಕು. ಎಂಬುವುದರ ಕುರಿತು ಮಾತುಕತೆ ನಡೆಸಿದ್ದು, ನನ್ನ ಕಡೆಯಿಂದ ಮೂವರ ಹೆಸರುಗಳು ಕೊಟ್ಟಿದ್ದೇನೆ. ನನಗೆ ತಿಳಿದಿರುವಂತೆ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಯಾರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಎಂಬ ಭಾವನೆ ತಿಳಿಸಿದ್ದೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ: ಪ್ರತಾಪ್ ಗೌಡ ಪಾಟೀಲರಿಗೆ ಬಿಜೆಪಿ ಟಿಕೆಟ್ ಫಿಕ್ಸ್ : ಬೆಳಗಾವಿ, ಬಸವಕಲ್ಯಾಣ ಅಭ್ಯರ್ಥಿ ಆಯ್ಕೆ ಜವಾಬ್ದಾರಿ ಕಟೀಲ್ ಹೆಗಲಿಗೆ
ಬೆಳಗಾವಿ ಗೆಲ್ಲುವ ಕ್ಷೇತ್ರ. ಆದ್ದರಿಂದ ಅಭ್ಯರ್ಥಿಗಳ ಸಂಖ್ಯೆ ಸಾಕಷ್ಟಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಒತ್ತು ಕೊಡುವುದು ಪಕ್ಷದ ಕರ್ತವ್ಯ ಆಗಿದ್ದು, ಅಂಗಡಿಯವರ ಕುಟುಂಬ ಕೂಡ ಬಿಜೆಪಿ ಪಕ್ಷದ ಜೊತೆಗೆ ಬಹಳ ವರ್ಷಗಳ ಕಾಲ ಸಾಕಷ್ಟು ಒಡನಾಟ ಇಟ್ಟುಕೊಂಡಿದೆ. ಹೀಗಾಗಿ ಅದನ್ನು ಕೇಂದ್ರದ ನಾಯಕರ ಗಮನಕ್ಕೆ ತಂದಿದ್ದೇನೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು. ಕೇಂದ್ರ ನಾಯಕರು ಯಾರನ್ನು ಆಯ್ಕೆ ಮಾಡುತ್ತಾರೆ ಅದಕ್ಕೆ ನಮ್ಮ ಒಪ್ಪಿಗೆ ಇದೆಯೆಂದು ಹೇಳಿದ್ದೇನೆ. ಪ್ರತಿ ಮೂರನೇ ವಾರ ನನ್ನ ಗ್ರಾಮ ವಾಸ್ತವ್ಯ ಇರುವುದರಿಂದ ಕಮಿಟಿ ಸಭೆಗೆ ಹಾಜರಾಗದಿರುವ ಬಗ್ಗೆ ಅನುಮತಿ ಪಡೆದುಕೊಂಡು ಬಂದಿದ್ದೇನೆ ಎಂದು ಹೇಳಿದರು.