ಬೆಳಗಾವಿ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಜಿದ್ದಿಗೆ ಬಿದ್ದಂತೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಆದ್ರೆ ಬೇರೆ ರಾಜ್ಯಗಳಂತೆ ಇಲ್ಲಿಯೂ ಪರೀಕ್ಷೆ ರದ್ದುಪಡಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹಿನ್ನೆಲೆ ಎಸ್ಎಸ್ಎಲ್ಸಿ, ಡಿಗ್ರಿ ಪರೀಕ್ಷೆ ಮಾಡದೇ ವಿದ್ಯಾರ್ಥಿಗಳನ್ನ ಪಾಸ್ ಮಾಡಬೇಕು ಎಂಬ ಕುರಿತು ಸುವರ್ಣಸೌಧದ ಮುಂದೆ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಿದೇ ಅರೆಸ್ಟ್ ಮಾಡಿದರು ಎಂದು ಆರೋಪಿಸಿದರು.
ನಿನ್ನೆ ನಡೆದ ಇಂಗ್ಲಿಷ್ ಪರೀಕ್ಷೆಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹೆದರಿಕೆ, ಅಂಜಿಕೆಯಿಂದಲೇ ಬರೆದು ಹೋಗಿದ್ದಾರೆ. ದೇಶದ 12 ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡದೇ ಪಾಸ್ ಮಾಡಿದ್ದಾರೆ. ಅದರಂತೆ ಇಲ್ಲಿಯೂ ಪರೀಕ್ಷೆ ರದ್ದುಪಡಿಸಿ ಪಾಸ್ ಮಾಡಬೇಕು. ಇದೇ ವಿಚಾರವಾಗಿ ನಾಳೆ ಪರೀಕ್ಷಾ ಮಂಡಳಿ ಎದುರು ಹಾಗೂ ಜೂ. 23ರಂದು ಸುರೇಶ್ ಕುಮಾರ್ ಅವರ ಮನೆ ಮುಂದೆ ಏಕಾಂಗಿ ಸತ್ಯಾಗ್ರಹ ಮಾಡಲಿದ್ದೇನೆ ಎಂದರು.