ಅಥಣಿ: ತಿರುಚಿರಾಪಳ್ಳಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಲಾಂಗ್ಜಂಪ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಸಂದೀಪ್ ಕುಂಬಾರ ಎಂಬಾತ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಸತತ ಪ್ರಯತ್ನ ಒಂದಿದ್ದರೆ, ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಂದೀಪ ಕುಂಬಾರ ರಾಷ್ಟ್ರಕ್ಕೆ ಚಿನ್ನದ ಪದಕ ಗೆಲ್ಲವುದರ ಮೂಲಕ ಸಾಧಿಸಿ ತೋರಿಸಿದ್ದಾನೆ.
ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದವನಾದ ಸಂದೀಪ ಇತ್ತೀಚಿಗೆ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನ ಪದಕ ಪಡೆದು ಸಾಧನೆ ಮೆರೆದಿದ್ದಾರೆ. ಈ ಮೂಲಕ ಮುಂದಿನ ತಿಂಗಳು 10 ರಂದು ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ ಕುಟುಂಬ ಹಾಗೂ ಗ್ರಾಮಕ್ಕೆ ಸಂದ ಜಯ. ಇನ್ನು ಮುಂದೆ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರಿಡಾಕೂಟದಲ್ಲೂ ನನ್ನ ಮಗ ಉತ್ತಮ ಸಾಧನೆ ಮಾಡುತ್ತಾನೆ. ದೇಶದ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುತ್ತಾನೆ ಎಂದು ಆತನ ತಂದೆ ರಾಮು ಕುಂಬಾರ ಹೆಮ್ಮೆಯಿಂದ ಹೇಳಿಕೊಂಡು ಸಂತಸ ಹಂಚಿಕೊಂಡಿದ್ದಾರೆ.
ಸಂದೀಪ್ ಅವರಿಗೆ ದೈಹಿಕ ಶಿಕ್ಷಕ ಜ್ಞಾನೇಶ್ವರ್ ಚೌಗಲಾ ಅವರು ಮಾರ್ಗದರ್ಶನ ಮಾಡಿದ್ದರು. ಯುವಕನ ಸಾಧನೆಗೆ ಸಪ್ತಸಾಗರ ಗ್ರಾಮಸ್ಥರು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.