ಬೆಳಗಾವಿ: ಬಿಜೆಪಿಯವರಿಗೆ ರಾಹುಲ್ ಗಾಂಧಿಗೆ ಸಿಂಹಸ್ವಪ್ನವಾಗಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಟ್ಯಾಂಡ್ ಇಲ್ಲ ಎಂಬ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ನರೇಂದ್ರ ಮೋದಿಯೂ ಎಲ್ಲರ ಕೈ ಹಿಡಿದಿದ್ದಾರೆ. ತಮಿಳುನಾಡಿನಲ್ಲಿ ಎಐಎಡಿಂಕೆ ಕೈ ಹಿಡಿದಿಲ್ವ? ಎಂದು ಪ್ರಶ್ನಿಸಿದರು. ಅಲೈಯನ್ಸ್ ಮಾಡೋದು ತಪ್ಪಲ್ಲ. ಸಂವಿಧಾನ ರಕ್ಷಣೆ, ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಬಂದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ, ಅವರು ಬರಲಿಲ್ಲ ಅಂದ್ರೆ ಬಂದಿಲ್ಲ ಅಂತೀರಿ, ಬಂದ್ರೆ ಬಂದಿದ್ದೀರಿ ಅಂತೀರಿ. ಇದನ್ನು ನೋಡಿದ್ರೆ ರಾಹುಲ್ ಗಾಂಧಿ ನಿಮ್ಮ ಕನಸಲ್ಲೂ ಬರ್ತಾರೆ ಅಂತಾ ಅರ್ಥ ಅಲ್ವೇ? ಎಂದು ಕೇಳಿದರು.
ಇನ್ನು ದೇಶದ ಸೈನಿಕರ ಬಗ್ಗೆ ನಮಗೆಲ್ಲ ಗೌರವವಿದೆ. ಗಡಿಭಾಗದಲ್ಲಿ ಹೋರಾಡುವವರು ದೇಶದ ಪ್ರತಿಯೊಂದು ಭಾಗದವರು ಬರ್ತಾರೆ. ದೇಶದ ಐಕ್ಯತೆಗಾಗಿ ಎಲ್ಲರೂ ಒಗ್ಗೂಡಿಸಿದ್ದೇವೆ ಎಂದರು.
ಸತೀಶ್ ಜಾರಕಿಹೊಳಿ ಭಾರತೀಯ ಸಂಸ್ಕೃತಿ ವಿರೋಧಿ ಎಂಬ ಅರುಣ್ ಸಿಂಗ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸತೀಶ್ ಜಾರಕಿಹೊಳಿ ಇವತ್ತೇ ಹುಟ್ಟಿ ಬೆಳೆದಿರುವ ಮನುಷ್ಯ ಅಲ್ಲ. ಬಸವೇಶ್ವರ ತತ್ವ ಏನು ಹೇಳುತ್ತದೆ? ಅಂಧಶ್ರದ್ಧೆ ನಂಬಬೇಡಿ ಎನ್ನುತ್ತದೆ. ಅಂದು ಈ ಸಮಾಜಕ್ಕೆ ಬಸವಣ್ಣನವರು ಮಾಡಿದ ಕೆಲಸವನ್ನು ಸತೀಶ್ ಜಾರಕಿಹೊಳಿ ಇಂದು ಸಂವಿಧಾನ ಬದ್ಧವಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಬಸ್ ಸ್ಟ್ಯಾಂಡ್ ಇದ್ದಂತೆ, ಅದಕ್ಕೆ ಯಾವುದೇ ನಿಲುವುಗಳಿಲ್ಲ : ಪ್ರಲ್ಹಾದ್ ಜೋಶಿ
ಕೇಂದ್ರ ಸಚಿವ ಜೋಶಿ ಹೇಳಿದ್ದೇನು?
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಒಂದೊಂದು ರಾಜ್ಯದಲ್ಲಿ ಒಂದೊಂದು ನಿಲುವನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಸರ್ಕಾರ ರಚಿಸಿದೆ. ಬೇರೆ ಕಡೆ ಕಮ್ಯೂನಿಸ್ಟ್ ಪಕ್ಷದ ಜತೆಗೆ ಕೈಜೋಡಿಸಿದೆ. ರಾಜಕೀಯ ವಿಚಾರಧಾರೆ ಈ ಪಕ್ಷಕ್ಕಿಲ್ಲ ಎಂದು ಗೇಲಿ ಮಾಡಿದ್ದರು.