ಚಿಕ್ಕೋಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ನಡೆದಿದ್ದು, ಒಟ್ಟು ನಾಲ್ಕು ಜನ ಆಕಾಂಕ್ಷಿಗಳಲ್ಲಿ ಈಗ ಕೊನೆಯದಾಗಿ ಇಬ್ಬರು ಆಕಾಂಕ್ಷಿಗಳು ಪೈಪೋಟಿಯಲ್ಲಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈಗಾಗಲೇ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಬೆಳಗಾವಿಯಿಂದ ಸುರೇಶ ಅಂಗಡಿ ಹೆಸರು ಫೈನಲ್ ಆಗಿದೆ. ಅವರ ಟಿಕೆಟ್ ತಪ್ಪಿಸಲು ನಡೆಸಿದ ಪ್ರಯತ್ನಗಳು ಕೊನೆಗೂ ವಿಫಲಗೊಂಡಿವೆ.
ಆದರೆ, ಚಿಕ್ಕೋಡಿಯ ಟಿಕೆಟ್ ಘೋಷಣೆಯನ್ನು ತಡೆಹಿಡಿಯಲಾಗಿದ್ದು, ಈಗ ಪ್ರಮುಖವಾಗಿ ಇಬ್ಬರು ಅಭ್ಯರ್ಥಿಗಳ ಹೆಸರು ಕೇಳಿ ಬರುತ್ತಿದೆ.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಅವರ ಹೆಸರು ಕೊನೆಯ ಕ್ಷಣದವರೆಗೂ ಕೇಳಿಬರುತ್ತಿತ್ತು. ಆದರೆ, ಇನ್ನೊಬ್ಬ ಪ್ರಬಲ ಆಕಾಂಕ್ಷಿ ಹಾಗೂ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಕಿರಿಯ ಸಹೋದರ ರಮೇಶ್ ಕತ್ತಿ ಅವರ ಹೆಸರು ಕೂಡಾ ಅಭ್ಯರ್ಥಿ ಅಂತಾ ಕೇಳಿ ಬರುತ್ತಿದೆ. ಈ ಇಬ್ಬರಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.