ಬೆಳಗಾವಿ : ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಕಳೆದ ವರ್ಷದ ಡಿಸೆಂಬರ್ ತಿಂಗಳಿಗೆ ಹೊಲಿಸಿದ್ರೆ, ಜಿಲ್ಲೆಯಲ್ಲಿ ಮದ್ಯ ಮಾರಾಟ ಜೋರಾಗಿಯೇ ನಡೆದಿದೆ. ಕೇವಲ 23 ದಿನಗಳ ಅವಧಿಯಲ್ಲಿ ಬರೋಬ್ಬರಿ 1,18,681 ಪೆಟ್ಟಿಗೆ ಮದ್ಯ, 40,157 ಪೆಟ್ಟಿಗೆ ಬಿಯರ್ ಮಾರಾಟವಾಗಿದ್ದು, ಹೆಚ್ಚುವರಿಯಾಗಿ 26,044 ಪೆಟ್ಟಿಗೆ ಮದ್ಯ, 5,489 ಬಿಯರ್ ಪೆಟ್ಟಿಗೆಗಳು ಮಾರಾಟವಾಗಿವೆ.
ಮೊದಲ ಹಂತದಲ್ಲಿ ಬೆಳಗಾವಿ, ಖಾನಾಪುರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಗೋಕಾಕ್, ಮೂಡಲಗಿ ತಾಲೂಕುಗಳ 259 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಮತದಾನ ನಡೆದಿತ್ತು. ಹೀಗಾಗಿ ಸಾಮಾನ್ಯ ದಿನಗಳಿಗಿಂತಲೂ ಗ್ರಾಪಂ ಚುನಾವಣೆ ಘೋಷಣೆಯಾದ 23 ದಿನದಲ್ಲಿ ಜಿಲ್ಲೆಯಲ್ಲಿ ಮದಿರೆಯ ಕಿಕ್ ಜೋರಾಗಿ ನಡೆದಿದೆ ಎಂದು ಅಬಕಾರಿ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ (ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ) ಡಿಸೆಂಬರ್ನಲ್ಲಿ ಮದ್ಯ ಮತ್ತು ಬಿಯರ್ ಮಾರಾಟ ಜೋರಾಗಿ ನಡೆದಿದೆ. 53,907 ಪೆಟ್ಟಿಗೆ ಮದ್ಯ, 25,109 ಪೆಟ್ಟಿಗೆ ಬಿಯರ್ ಬ್ಯಾಕ್ಸ್ಗಳು ಹೆಚ್ಚುವರಿಯಾಗಿ ಮಾರಾಟವಾಗಿದ್ದು, ಅಬಕಾರಿ ಇಲಾಖೆಗೂ ಆದಾಯ ಹೆಚ್ಚಳವಾಗಿದೆ.
ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟಕ್ಕೆ ಕಡಿವಾಣ : ಗ್ರಾಪಂ ಚುನಾವಣಗೆ ನೀತಿ ಸಂಹಿತೆ ಘೋಷಣೆ ಆದಾಗಿನಿಂದ ಅಂದ್ರೆ ಡಿ.30 ರಿಂದ 23ರವರೆಗೆ ಬೆಳಗಾವಿ ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ 26 ಗಂಭೀರ ಪ್ರಕರಣ ದಾಖಲಿಸಿಕೊಂಡು 177 ಲೀಟರ್ ಇಂಡಿಯನ್ ಮೇಡ್ ಮದ್ಯ, 365 ಲೀಟರ್ ಕಳ್ಳಭಟ್ಟಿ ಸರಾಯಿ ಹಾಗೂ 1,233 ಲೀಟರ್ ಗೋವಾ ಮದ್ಯ ವಶಪಡಿಸಿಕೊಂಡು 20 ವಾಹನಗಳ ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಮೇಲೆಯೂ 46 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈವರೆಗೆ 58 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮದ್ಯ ಮಾರಾಟ ಏರಿಕೆ : 2019ರ ಡಿಸೆಂಬರ್ 1ರಿಂದ 23ರವರೆಗೆ 92,637 ಪೆಟ್ಟಿಗೆ ಮದ್ಯ, 34,668 ಪೆಟ್ಟಿಗೆ ಬಿಯರ್ ಮಾರಾಟವಾಗಿತ್ತು. 2020ರ ಡಿಸೆಂಬರ್ 1ರಿಂದ 23ರವರೆಗೆ 1,18,681 ಪೆಟ್ಟಿಗೆ ಮದ್ಯ, 40,157 ಪೆಟ್ಟಿಗೆ ಬಿಯರ್ ಮಾರಾಟವಾಗಿದೆ. 1 ಬಾಕ್ಸ್ನಲ್ಲಿ 9 ಲೀಟರ್ ಮದ್ಯ, 1 ಬಾಕ್ಸ್ 7.8 ಲೀಟರ್ ಬಿಯರ್ ಇರಲಿದ್ದು, ವೈನ್ ಶಾಪ್‍ಗಳಲ್ಲಿಯೇ ಮದ್ಯದ ಮಾರಾಟ ಹೆಚ್ಚಳವಾಗಿದೆ. ಕಾರಣ, ವೈನ್ ಶಾಪ್‍ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶವಿದ್ದು, ಹೀಗಾಗಿ ಹೆಚ್ಚು ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಯರ್ ವ್ಯಾಪಾರದಲ್ಲಿ ಕುಸಿತ : ಕುಂದಾನಗರಿಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಬಿಯರ್ ಮಾರಾಟದಲ್ಲಿ ಕುಸಿತವಾಗಿದ್ದು, ಕೋವಿಡ್ ಕಾರಣದಿಂದ ಹಲವಾರು ಜನರು ಬಿಯರ್ ಕುಡಿಯುವುದನ್ನು ಬಿಟ್ಟಿದ್ದಾರೆ. ಬಿಯರ್ ತಣ್ಣಗೆ ಇರುವುದರಿಂದ ನೆಗಡಿ, ಜ್ವರವಾಗಿ ಎಲ್ಲಿ ಕೊರೊನಾಗೆ ತುತ್ತಾಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಬಿಯರ್ ಖರೀದಿಗೆ ಮುಂದಾಗಿಲ್ಲ. ಇದರಿಂದ ಬಿಯರ್ ಮಾರಾಟ ಕಡಿಮೆಯಾಗಿದೆ ಎಂದು ವೈನ್ ಶಾಪ್ ಮಾಲೀಕರು ತಿಳಿಸಿದ್ದಾರೆ.
ಓದಿ : ರಸ್ತೆ ಬದಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಪೊಲೀಸರ ವಿಡಿಯೋ ವೈರಲ್ : ಇಬ್ಬರು ಪೊಲೀಸರು ಅಮಾನತು
ಹಳ್ಳಿಗಳಲ್ಲಿ ಹೆಚ್ಚಿದ ಮದ್ಯ ಮಾರಾಟ : ಗ್ರಾಮ ಪಂಚಾಯತ್ ಚುನಾವಣೆ ಅಂಗವಾಗಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ಹೆಚ್ಚಳವಾಗಿದೆ. ಹೋಬಳಿ ಕೇಂದ್ರ, ನಗರ ಸಮೀಪವಿರುವ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಗ್ರಾಮಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ನಗರ ಪ್ರದೇಶದಲ್ಲಿ ಮದ್ಯ ಮಾರಾಟ ತಗ್ಗಿದೆ ಎನ್ನುವುದು ಅಬಕಾರಿ ಇಲಾಖೆ ಅಧಿಕಾರಿಗಳ ಮಾಹಿತಿ.
ಕುರಿ ಮತ್ತು ಮೇಕೆಗಳಿಗೂ ಬೇಡಿಕೆ : ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಪ್ರತಿದಿನ ಮಾಂಸಹಾರಿ ಪಾರ್ಟಿಗಳನ್ನ ಆಯೋಜನೆ ಮಾಡುತ್ತಿದ್ದರಿಂದ ಜಾನುವಾರು ಮಾರುಕಟ್ಟೆಗೆ ಬರುತ್ತಿದ್ದ ಕುರಿ, ಮೇಕೆಗಳನ್ನ ಅಭ್ಯರ್ಥಿಗಳು ಪಾರ್ಟಿಗಳಿಗೆ ಬಳಸಿಕೊಂಡ ಪರಿಣಾಮ ಸಾಮಾನ್ಯ ದಿನಗಳಲ್ಲಿ 5-7 ಸಾವಿರವರೆಗೆ ಇದ್ದ ಮೇಕೆ-ಕುರಿಗಳು ಇದೀಗ 7ರಿಂದ ₹10 ಸಾವಿರದವರೆಗೆ ಮಾರಾಟ ಮಾಡಲಾಗುತ್ತಿದ್ರೆ, ಇತ್ತ ಕೆಲ ಅಭ್ಯರ್ಥಿಗಳು ಶತಾಯಗತಾಯ ಗೆಲುವು ಸಾಧಿಸಲೇಬೇಕೆಂದು ಮಾಟ ಮಂತ್ರದ ಮೊರೆ ಹೋದ ಘಟನೆಗಳು ನಡೆದಿವೆ.