ಬೆಳಗಾವಿ: ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರಿದರು. ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಆಹಾರ ನಿಗಮ (ಎಫ್‌ಸಿಐ)ನವರು ಮೊದಲು ಕೊಡುತ್ತೇವೆಂದು ಹೇಳಿ ಈಗ ವಿತ್‌ಡ್ರಾ ಮಾಡಿಕೊಂಡಿದ್ದಾರೆ. ರಾಜ್ಯದ ಜನರು ಯೋಚನೆ ಮಾಡಬೇಕಾಗಿಲ್ಲ. ನಾವು ಏನು ಭರವಸೆ ಕೊಟ್ಟಿದ್ದೇವೋ ಅದನ್ನು ಈಡೇರಿಸುತ್ತೇವೆ. ಜಾರ್ಖಂಡ್, ತೆಲಂಗಾಣ, ಪಂಜಾಬ್ ರಾಜ್ಯಗಳ ಜತೆ ಚರ್ಚೆ ಆಗುತ್ತಿದೆ. ಹೆಚ್ಚಿನ ಮಾಹಿತಿಯನ್ನು ನಮ್ಮ ಆಹಾರ ಸಚಿವರು ಕೊಡುತ್ತಾರೆ ಎಂದರು.
ಗೃಹಜ್ಯೋತಿ ಯೋಜನೆಗೆ ಇವತ್ತಿನಿಂದ ಅರ್ಜಿ ಕರೆದಿದ್ದೇವೆ. ಈಗಾಗಲೇ ಜಾಹೀರಾತು ಹಾಗೂ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡುತ್ತಿದ್ದೇವೆ. ಗೃಹಲಕ್ಷ್ಮಿ ಅಪ್ಲಿಕೇಷನ್ ಕೂಡ ಅತೀ ಬೇಗ ಲಾಂಚ್ ಮಾಡುತ್ತೇವೆ. ಗೃಹಲಕ್ಷ್ಮಿ ಅನುಷ್ಠಾನಕ್ಕೆ ತಾಂತ್ರಿಕ ತೊಂದರೆ ಆಗಿರುವ ವಿಚಾರಕ್ಕೆ ಸಾಫ್ಟ್‌ವೇರ್ ಮತ್ತು ಆ್ಯಪ್ ಸಿದ್ದ ಮಾಡಿದ್ದೇವೆ. ಪ್ರತಿ ಬೂತ್ನಲ್ಲಿ ನಾಲ್ಕು ಜನರನ್ನು ನೇಮಕ ಮಾಡುತ್ತಿದ್ದೇವೆ. 1 ಕೋಟಿ 13 ಲಕ್ಷ ಕುಟುಂಬಗಳು ಉಪಯೋಗ ಪಡೆಯಲಿವೆ. ಲಾಂಚ್ ಮಾಡಿದಾಗ ಗೊಂದಲ ಮೂಡಬಾರದು ಎಂಬ ಒಂದೇ ಕಾರಣಕ್ಕೆ ಸೂಕ್ಷ್ಮವಾಗಿ ಸಾಫ್ಟ್‌ವೇರ್ ರೆಡಿ ಮಾಡುತ್ತಿದ್ದೇವೆ. ಬಹಳ ಬೇಗ ಇದನ್ನ ಲಾಂಚ್ ಮಾಡುತ್ತೇವೆ. ಅದೇ ಕೆಲಸ ಈಗ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: 'ಅನ್ನಭಾಗ್ಯ ಯೋಜನೆ'ಯಡಿ ಅಕ್ಕಿ ನೀಡಲು ನಿರಾಕರಣೆ.. ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ಪ್ರತಿಭಟನೆ: DCM
ಶಕ್ತಿ ಯೋಜನೆಯಿಂದ ಮಹಿಳೆಯರ ಶಕ್ತಿ ಪ್ರದರ್ಶನವಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಮಹಿಳೆಯರು ಕೇವಲ ಮನೆ ಕೆಲಸಕ್ಕೆ, ಮಕ್ಕಳನ್ನು ಹೆರುವುದಕ್ಕೆ ಮಾತ್ರ ಸೀಮಿತವಾಗಬಾರದು. ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಮಹಿಳೆಯರು ನೆಮ್ಮದಿಯಿಂದ ಜೀವನ ಮಾಡಬೇಕೆಂಬುದು ಸರ್ಕಾರದ ಉದ್ದೇಶ. ಎಲ್ಲ ಮಹಿಳೆಯರು ದೇವಸ್ಥಾನಕ್ಕೆ ಹೋಗಿ ಎಲ್ಲರೂ ಪುನೀತರಾಗಲಿ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿ ಅಂತಾ ನಾನೂ ಪ್ರಾರ್ಥಿಸುವೆ ಎಂದು ತಿಳಿಸಿದರು.
ಮಹದಾಯಿ ವಿಚಾರದಲ್ಲಿ ಗೋವಾಕ್ಕೆ ಮಹಾರಾಷ್ಟ್ರ ಬೆಂಬಲ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಈಗ ತಾನೇ ಬೆಳಗಾವಿಗೆ ಬಂದಿದ್ದೇನೆ. ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪ್ರತಿಭಟನೆ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಎಫ್‌ಸಿಐ ಅಕ್ಕಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಜೂ.16ರಂದು ಪ್ರತಿಭಟನೆ ನಡೆಸಿದ್ದರು. ರೇಸ್ ಕೋರ್ಸ್ ರಸ್ತೆಯಲ್ಲಿ ಸೇರಿದ ಕಾರ್ಯಕರ್ತರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗೆ ಅಕ್ಕಿ ನಿರಾಕರಣೆ ಖಂಡಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ