ಬೆಳಗಾವಿ: ಇನ್ಮುಂದೆ ಲಖನ್ ಜಾರಕಿಹೊಳಿ ನನ್ನ ತಮ್ಮನಲ್ಲ, ಆತ ವಿರೋಧಿ. ಆತ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಗುಡುಗಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸತೀಶ ಮಾತು ಕೇಳಿ ಓರ್ವ ಸಹೋದರ ಭೀಮಶಿ ಹಾಳು ಆಗಿದ್ದಾನೆ. ಇದನ್ನು ನೋಡಿಯೂ ಸತೀಶ ಜತೆಗೆ ಲಖನ್ ಹೋಗಿದ್ದಾನೆ. ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ. ಹೀಗಾಗಿ ಲಖನ್ ಇವತ್ತಿನಿಂದ ನನ್ನ ತಮ್ಮನಲ್ಲ, ವಿರೋಧಿ ಎಂದರು.
ನಮ್ಮ ವಿರೋಧಿಗಳು ನನ್ನನ್ನು ಕಾನೂನು ಚೌಕ್ಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದರು. ಹೀಗಾಗಿ ಬಿಜೆಪಿ ಸೇರುವ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿರಲಿಲ್ಲ. ನಮ್ಮ ವಿರೋಧಿಗಳು ಕುತಂತ್ರ ಮಾಡಿ ನನ್ನ ಸೋಲಿಸಬಹುದು. ಆದರೆ ದೆವರ ದಯೇ ನನ್ನ ಮೇಲಿದೆ. ಒಂದು ಮತ ಆಗಲಿ, ಲಕ್ಷ ಮತವಾಗಲಿ ಗೋಕಾಕ್ ಕ್ಷೇತ್ರದಲ್ಲಿ ನನ್ನ ಗೆಲುವು ಖಚಿತ ಎಂದರು.
ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ಆರ್. ಶಂಕರ್ ಗೊಂದಲಕ್ಕೆ ಸಿಲುಕಿದರು. ಸಿಎಂ ಮುಂದೆ ಚುನಾವಣೆ ಸ್ಪರ್ಧೆ ಬಗ್ಗೆ ಸರಿಯಾದ ಅಭಿಪ್ರಾಯ ಹೇಳಲಿಲ್ಲ. ಹೀಗಾಗಿ ಆರ್. ಶಂಕರ್ಗೆ ಟಿಕೆಟ್ ಮಿಸ್ ಆಗಿದೆ. ಶಂಕರ್ ಅವರನ್ನು ಎಂಎಲ್ಸಿ ಮಾಡಿಸುವ ಜವಾಬ್ದಾರಿ ನನ್ನದು ಎಂದರು.
ಸತೀಶ್ ಮತ್ತು ರಮೇಶ್ ಒಂದೇ ವಿಮಾನದಲ್ಲಿ ಬಂದಿರುವುದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ, ಆತನ ಜತೆಗೆ ವಿಮಾನದಲ್ಲಿ ಬಂದಿರುವುದು ಸಹಜ. ಆದರೆ ಆತನೊಂದಿಗೆ ಮಾತನಾಡಿಲ್ಲ. ಸತೀಶ್ ಜಾರಕಿಹೊಳಿ ಜತೆಗೆ ನಾನು ನಲವತ್ತು ವರ್ಷದಿಂದ ಮಾತಾಡಿಲ್ಲ ಮುಂದೆಯೂ ಮಾತನಾಡುವುದಿಲ್ಲ. ಲಖನ್ ಜಾರಕಿಹೊಳಿ ನನಗೆ ಬೆನ್ನಿಗೆ ಚೂರಿ ಹಾಕಿದ್ದಾನೆ. ಆದರೆ ಸತೀಶ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದರು.
ರಮೇಶ್ ಜಾರಕಿಹೊಳಿ ನನ್ನ ಶಿಷ್ಯ ಅಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಮೇಶ, ಸಿದ್ದರಾಮಯ್ಯ ಹೇಳಿರುವುದರಲ್ಲಿ ಸತ್ಯವಿದೆ. ಹೆಚ್.ವಿಶ್ವನಾಥ್ ನನ್ನ ಗುರು, ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್ ಎಂದರು.