ಬೆಳಗಾವಿ/ಚಿಕ್ಕೋಡಿ: ದೆಹಲಿ ಗಡಿ ಭಾಗದಲ್ಲಿ 80ಕ್ಕೂ ಹೆಚ್ಚು ರೈತರು ಕೃಷಿ ಮಸೂದೆ ರದ್ದು ಮಾಡಲು ಹೋರಾಟ ಮಾಡಿ ಸಾವನ್ನಪ್ಪಿದ್ದಾರೆ. ಸಾವಿನ ಮೇಲೆ ನೀವು ರಾಜಕೀಯ ಮಾಡುತ್ತಿದ್ದೀರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರೈತ ಮಹಿಳೆ ಜಯಶ್ರೀ ಗುರನ್ನವರ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಅವರು ಮಾತನಾಡಿದರು. ಅಮಿತ್ ಶಾ ಓರ್ವ ಭ್ರಷ್ಟ ರಾಜಕಾರಣಿ. ಬಂಡವಾಳಶಾಹಿಗಳಿಗೋಸ್ಕರ ನೀವು ಕೃಷಿ ಮಸೂದೆ ತಿದ್ದುಪಡಿಗೆ ಮುಂದಾಗಿದ್ದೀರಿ ಎಂದು ಗಂಭೀರ ಆರೋಪ ಮಾಡಿದರು.
ಈಗ ಕೊರೊನಾ ಮಹಾಮಾರಿ ನಡುವೆಯೂ ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾವೇಶಕ್ಕೆ ಲಕ್ಷಾಂತರ ಜನರನ್ನು ಒಟ್ಟುಗೂಡಿಸುತ್ತಿದ್ದೀರಿ. ನೀವು ಜನರಿಗೆ ರೋಗ ಹಚ್ಚಲು ಬರುತ್ತಿದ್ದೀರಿ. ನಿಮಗೆ ನಾಚಿಕೆ ಆಗಬೇಕು ಎಂದು ಜಯಶ್ರೀ ವಾಗ್ದಾಳಿ ನಡೆಸಿದರು.
ಇನ್ನು ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ದ ಬಾರುಕೋಲು ಹೊಡೆಯುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಅನ್ನದಾತರು, ಅಮಿತ್ ಶಾ, ಕೇಂದ್ರ ಮಂತ್ರಿಗಳು ಮತ್ತು ಬಿಜೆಪಿ ನಾಯಕರ ವಿರುದ್ದ ಆಕ್ರೋಶದ ಘೋಷಣೆ ಕೂಗಿದರು.
ಪ್ರತಿಭಟನಾ ಸ್ಥಳದಲ್ಲಿ ಕಟ್ಟಿಗೆ ಕುರ್ಚಿ ಹಾಕಿ "ಮಾನ್ಯ ಅಮಿತ್ ಶಾ ಅವರಿಗೆ ಸ್ವಾಗತ. ಬನ್ನಿ ಕಾನೂನಿನ ಬಗ್ಗೆ ತಿಳಿಸಿ, ರೈತರ ಜೊತೆ ಬಹಿರಂಗ ಚರ್ಚೆಗೆ ಬನ್ನಿ" ಎಂದು ಅನ್ನದಾತರು ಕಿಡಿಕಾರಿದರು.