ಬೆಳಗಾವಿ: ವೀರರಾಣಿ ಚೆನ್ನಮ್ಮಳ ಸ್ಮರಣೆಯ ಕಿತ್ತೂರು ಉತ್ಸವ-2022ಕ್ಕೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ಉತ್ಸವದ ವೀರಜ್ಯೋತಿಯ ಸ್ವಾಗತ ಮತ್ತು ಆನೆಯ ಮೇಲೆ ವೀರಮಾತೆ ಚೆನ್ನಮ್ಮಾಜಿಯ ಭವ್ಯ ಮೆರವಣಿಗೆ ಕಲ್ಮಠದ ರಾಜಯೋಗೀಂದ್ರ ಸ್ವಾಮೀಜಿ ಸಮ್ಮುಖದಲ್ಲಿ ನೆರವೇರಿತು.
ಬೆಂಗಳೂರಿನಿಂದ ಆರಂಭವಾಗಿ ಇಡೀ ರಾಜ್ಯ ಸಂಚರಿಸಿ ಬೈಲಹೊಂಗಲದ ಚೆನ್ನಮ್ಮಾಜಿ ಸಮಾಧಿಯಿಂದ ಆಗಮಿಸಿದ ವೀರಜ್ಯೋತಿಯನ್ನು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ 10 ಗಂಟೆಗೆ ಸ್ವಾಗತಿಸಲಾಯಿತು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ್ ಪಾಟೀಲ್, ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಜಿ.ಪಂ.ಸಿಇಒ ದರ್ಶನ್, ಎಸ್‍ಪಿ ಡಾ.ಸಂಜೀವ್ ಪಾಟೀಲ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಸೇರಿದಂತೆ ಇನ್ನಿತರ ಗಣ್ಯರು ಚೆನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಇದಾದ ಬಳಿಕ ಉತ್ಸವದ ಧ್ವಜಾರೋಹಣ ನೆರವೇರಿಸಿ ಜ್ಯೋತಿಯನ್ನು ಬರಮಾಡಿಕೊಂಡರು.
ಜ್ಯೋತಿ ಸ್ವಾಗತದ ಬಳಿಕ ಚೆನ್ನಮ್ಮ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಜಾನಪದ ಕಲಾವಾಹಿನಿಗೆ ಚಾಲನೆ ಕೊಟ್ಟರು. ಇದೇ ಮೊದಲ ಬಾರಿಗೆ ಆನೆಯ ಮೇಲೆ ಚೆನ್ನಮ್ಮಾಜಿಯ ಭವ್ಯ ಮೆರವಣಿಗೆಯು ಕಿತ್ತೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಕಿತ್ತೂರು ಕಲಿಗಳ ವಿಜಯದ ಸಂಕೇತದ ಹಬ್ಬ: 1824ರ ಅಕ್ಟೋಬರ್ 23ರಂದು ಕಿತ್ತೂರು ಕಲಿಗಳು ಬ್ರಿಟಿಷ್ ಸೈನ್ಯವನ್ನು ಸೋಲಿಸಿ ಹಿಮ್ಮೆಟ್ಟಿಸಿದರು. ಆ ವಿಜಯದ ಸಂಕೇತವಾಗಿ ಉತ್ಸವ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಕಿತ್ತೂರು ಮಹಾದ್ವಾರದ ಬಳಿ ಇರುವ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಪ್ರತಿಮೆಗಳಿಗೂ ಗಣ್ಯರು ಮಾಲಾರ್ಪಣೆ ಮಾಡಿದರು. ಕಿತ್ತೂರಿನ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಜನರು ಕಾರ್ಯಕ್ರಮ ಕಣ್ತುಂಬಿಕೊಂಡರು. ಪೌರಾಣಿಕ ವೇಷಧಾರಿಗಳ ಜತೆ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗಿ: ಮೆರವಣಿಗೆಯಲ್ಲಿ ಸ್ವಾತಂತ್ರ್ಯದ ರಾಣಿ ಚೆನ್ನಮ್ಮನಿಗೆ ಜಯವಾಗಲಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ, ಅಮಟೂರ ಬಾಳಪ್ಪನವರು ಅಮರವಾಗಲಿ ಎಂಬ ಘೋಷಣೆಗಳು ಮೊಳಗಿದವು. ಸುಮಾರು 60 ಕಲಾವಿದರ ತಂಡಗಳು, 10 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಮೋಹನ ಕುಮಾರ ಸಂಗಡಿಗರ ಗಾರುಡಿ ಗೊಂಬೆ, ನಾಗರಾಜ ಸಂಗಡಿಗರ ಕೀಲುಕುದುರೆ, ಸುಮಿತ್ರಾ ಮುಂದಾಳತ್ವದ ಮಹಿಳಾ ಡೊಳ್ಳು ಕುಣಿತ, ಸತೀಶ ಕುಮಾರ ಹಾಗೂ ಸಂಗಡಿಗರ ಕೋಳಿನೃತ್ಯ, ಮುತ್ತುರಾಜ ನೇತೃತ್ವದ ಗೊರವರ ಕುಣಿತ, ಮಾನಶ್ರೀ ತಂಡದ ಪಟಾಕುಣಿತ, ಬಸಯ್ಯ ಬನ್ನಿಗೋಳಮಠ ತಂಡದ ಕಥಕ್ಕಳಿ, ವೀರಗಾಸೆ, ಮಹಾರುದ್ರಪ್ಪ ಇಟಗಿ ಅವರ ತಂಡದ ದೊಡ್ಡಸಂಬಾಳ ಮೇಳ, ನಿಶಾ ತಂಡದ ಮಹಿಳೆಯರ ನಗಾರಿ, ನವಿಲು ನೃತ್ಯ, ಕೇರಳ ತೆಯ್ಯಂ ನೃತ್ಯ, ಚಂಡೆಮದ್ದಳೆ, ಪೂಜಾ ಕುಣಿತ, ನಂದಿಧ್ವಜ, ಪಟಾಕುಣಿತ, ಶಿವಕುಮಾರ ನೇತೃತ್ವದ ಚಿಟ್ಟಿಮೇಳದವರು ಹುಮ್ಮಸ್ಸಿನಿಂದ ಕುಣಿದು ಕುಪ್ಪಳಿಸಿದರು. ಜನಪದ ಗೀತೆ ಗಾಯಕರ ತಂಡದವರು ಕಿತ್ತೂರಿನ ರಾಜವೈಭವವನ್ನು ಹಾಡಿ ಹೊಗಳಿದರು.
501 ಪೂರ್ಣಕುಂಭ ಹೊತ್ತು ಸಾಗಿದ ಮಹಿಳೆಯರು: ಮೆರವಣಿಗೆಯಲ್ಲಿ ಪೂರ್ಣಕುಂಭ ಕಳಶ ಹೊತ್ತ 501 ಮಹಿಳೆಯರು ಬರಿಗಾಲಲ್ಲಿ ಹೆಜ್ಜೆ ಹಾಕಿದರು. ಯುವತಿಯರ ತಂಡಗಳೂ ಬಣ್ಣಬಣ್ಣದ ಸೀರೆಗಳನ್ನುಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಉದ್ಘಾಟನೆಗೆ ಬಾರದ ಸಚಿವ: ಪೂರ್ವನಿಗದಿಯಂತೆ ಅ.23ರಂದು ಉತ್ಸವದ ಮೆರವಣಿಗೆ ನಡೆಯಬೇಕಿತ್ತು. ಶಾಸಕ ಆನಂದ ಮಾಮನಿ ಅವರ ಅಗಲಿಕೆಯ ಕಾರಣ ಇಂದಿಗೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಮೆರವಣಿಗೆಯ ಉದ್ಘಾಟನೆ ಮಾಡಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಇದನ್ನೂ ಓದಿ: ನಾಳೆ ಕಿತ್ತೂರು ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ