ಬೆಳಗಾವಿ: ಶಿವಸೇನೆ, ಎಂಇಎಸ್ ಪುಂಡಾಟ ಖಂಡಿಸಿ ಪ್ರವೀಣ ಶೆಟ್ಟಿ ನೇತೃತ್ವದಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣದ) ಕಾರ್ಯಕರ್ತರು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಗಡಿಯಲ್ಲಿ ಶಾಂತಿ ಭಂಗಕ್ಕೆ ಯತ್ನಿಸುತ್ತಿರುವ ಶಿವಸೇನೆ ಹಾಗೂ ಎಂಇಎಸ್ ವಿರುದ್ಧ ಕರವೇ ಕಾರ್ಯಕರ್ತರು ಘೋಷಣೆ ಕೂಗಿದರು. ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಪುಂಡಾಟಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಬೆಳಗಾವಿಯಲ್ಲಿ ನಾಡದ್ರೋಹಿ ಚಟುವಟಿಕೆ ನಡೆಸುತ್ತಿರುವ ಎಂಇಎಸ್ ಹಾಗೂ ಶಿವಸೇನೆ ಪುಂಡಾಟವನ್ನು ಕರವೇ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಳಿಕ ಕನ್ನಡದ ಶಾಲು ಧರಿಸಿ ಮಹಾರಾಷ್ಟ್ರದ ಗಡಿ ಗ್ರಾಮ ಶಿನ್ನೋಳಿಗೆ ನುಗ್ಗಲು ಯತ್ನಿಸಿದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸೇರಿ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಎಪಿಎಂಸಿ ಠಾಣೆಗೆ ಕರೆದೊಯ್ದು ಬಿಡುಗಡೆ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ (ಪ್ರವೀಣ ಶೆಟ್ಟಿ ಬಣದ) ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಬೆಳಗಾವಿ ಗಡಿಯಲ್ಲಿ ಶಿವಸೇನೆ, ಎಂಇಎಸ್ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಕನ್ನಡ ಶಾಲು ಹಾಕಿ ಅಡ್ಡಾಡಿದ್ರೆ ಹೊಡಿತೇವಿ ಎಂದು ಎಂಇಎಸ್ ಗೂಂಡಾ ಹೇಳಿಕೆ ನೀಡಿದ್ದಾನೆ. ಕೂಡಲೇ ಎಂಇಎಸ್ ಪುಂಡನ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಬೇಕು. ತಕ್ಷಣವೇ ಆತನನ್ನು ಗಡಿಪಾರು ಮಾಡಬೇಕು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತೊಂದರೆ ಆದ್ರ ರಾಜ್ಯದಲ್ಲಿ ಮತ್ತೊಂದು ಕ್ರಾಂತಿ ಆಗುತ್ತದೆ. ಎಂಇಎಸ್ ಗೆ ಎಚ್ಚರಿಕೆ ನೀಡಲೆಂದೇ ಕನ್ನಡದ ಶಾಲು ಹಾಕಿಕೊಂಡು ಮಹಾರಾಷ್ಟ್ರ ಗಡಿಯಲ್ಲಿ ನುಗ್ಗಿ ಕನ್ನಡ ಬಾವುಟ ಹಾರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.