ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಸಿಐಡಿ ಡಿಜಿಪಿ ಡಾ ಎಂ ಎ ಸಲೀಂ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಆಶ್ರಮಕ್ಕೆ ಇವತ್ತು ಸಿಐಡಿ ಹಿರಿಯ ಅಧಿಕಾರಿ ಡಿಜಿಪಿ ಡಾ.ಎಂ ಎ ಸಲೀಂ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವು ಕಾಲ ಸ್ಥಳಿಯರ ಜೊತೆ ಈಗಾಗಲೇ ತನಿಖೆ ಮಾಡಿರುವ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. ಈ ವೇಳೆ ಕಾಮಕುಮಾರ ನಂದಿ ಮಹಾರಾಜರ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದರು.
ಕೊನೆ ಹಂತಕ್ಕೆ ಸಿಐಡಿ ತನಿಖೆ:ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಆದೇಶಿಸಿದರು. ಜುಲೈ 23ರಿಂದ ಸಿಐಡಿ ಐಜಿ ಪ್ರವೀಣ ಮಧುಕರ್ ಪವಾರ್ ಹಾಗೂ ಅಧಿಕಾರಿಗಳ ತಂಡ ವಾರದಿಂದ ಚಿಕ್ಕೋಡಿಯಲ್ಲಿ ಬಿಡು ಬಿಟ್ಟು ಇಂಚು ಇಂಚಾಗಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ಕೊನೆ ಹಂತಕ್ಕೆ ಬಂದು ತಲುಪಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ಸಿಐಡಿ ಡಿಜಿಪಿ ಡಾ. ಎಂ ಎ ಸಲೀಂ ಅವರಿಗೆ ಸಿಐಡಿ ಐಜಿ ಪ್ರವೀಣ ಮಧುಕರ್ ಪವಾರ್, ಸಿಐಡಿ ಎಸ್‌ಪಿ ವೆಂಕಟೇಶಕುಮಾರ್, ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಸೇರಿ ಹಲವರು ಅಧಿಕಾರಿಗಳು ಜೊತೆಯಾಗಿ ನಂದಿ ಪರ್ವತಕ್ಕೆ ಭೇಟಿ ನೀಡಿದರು.
ಜೈನಮುನಿ ಹತ್ಯೆ ಪ್ರಕರಣ: ಜುಲೈ 5ರಂದು ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ನಡೆದಿತು. ಜುಲೈ 7ರಂದು ಚಿಕ್ಕೋಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಾಪತ್ತೆ ಕೇಸ್ ದಾಖಲಾದ ನಾಲ್ಕು ಗಂಟೆಯಲ್ಲೇ ಇಬ್ಬರು ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿ ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್ ವಶಕ್ಕೆ ಪಡೆಯಲಾಗಿತ್ತು. ಇಬ್ಬರು ಆರೋಪಿಗಳು ಶ್ರೀಗಳನ್ನು ಆಶ್ರಮದಲ್ಲಿ ಹತ್ಯೆಗೈದಿದ್ದರು. ಕೊಲೆ ಮಾಡಿ ಮೃತದೇಹವನ್ನು ಮಾವಿನಹೊಂಡ ಬಳಿಯ ಗುಡ್ಡಕ್ಕೆ ಒಯ್ದು ತುಂಡು ತುಂಡಾಗಿ ಕತ್ತರಿಸಿದ ಬಳಿಕ ಖಟಕಬಾವಿಯ ಕಬ್ಬಿನ ಗದ್ದೆಯಲ್ಲಿನ ತೆರೆದ ಕೊಳವೆಬಾವಿಗೆ ಎಸೆದಿದ್ದರು.
ಜುಲೈ 8ರಂದು ಕೊಳವೆಬಾವಿಯಿಂದ ಜೈನಮುನಿಗಳ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದರು. ಶವ ಸಿಗುತ್ತಿದ್ದಂತೆ ಹಂತಕರನ್ನು ಟೆಕ್ನಿಕಲ್ ಎವಿಡೆನ್ಸ್ ಸಮೇತ ಹಲವು ಸಾಕ್ಷ್ಯಗಳ ಸಂಗ್ರಹ ಮಾಡಲಾಗಿತ್ತು. ಜೈನಮುನಿಗಳ ಪರ್ಸನಲ್ ಡೈರಿ ಸಹ ಜಪ್ತಿ ಮಾಡಿದ್ದು, ಡೈರಿಯಲ್ಲಿ ಹಣ ನೀಡಿದ ಬಗ್ಗೆ ಹೆಸರು ಉಲ್ಲೇಖಿಸಿದ 20ಕ್ಕೂ ಹೆಚ್ಚು ಜನರ ವಿಚಾರಣೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಕರಣ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಈ ಹತ್ಯೆಯನ್ನು ಸಿಬಿಐ ಕೊಡಬೇಕು ಎಂದು ರಾಜ್ಯಾದ್ಯಂತ ಹಾಗೂ ಬಿಜೆಪಿ ನಾಯಕರು ಧ್ವನಿ ಎತ್ತಿದಾಗ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿ ತನಿಖೆಗೆ ಆದೇಶ ನೀಡಿದ್ದರು. ಜುಲೈ 23ರಿಂದ ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ತನಿಖೆ ಕೊನೆ ಹಂತಕ್ಕೆ ಬಂದಿದೆ. ಇವತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಬ್ಬರು ಹಂತಕರನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿದೆ.
ಇದನ್ನೂಓದಿ: ಷೇರು ವ್ಯವಹಾರದಿಂದ ನಷ್ಟ.. ಪತ್ನಿ- ಮಕ್ಕಳನ್ನ ಕೊಂದು ಟೆಕ್ಕಿ ಆತ್ಮಹತ್ಯೆ.. 3 ದಿನ ಶವಗಳೊಂದಿಗೇ ಕಾಲ ಕಳೆದಿದ್ದ!