ಬೆಂಗಳೂರು/ಬೆಳಗಾವಿ/ಮಂಗಳೂರು: ಕೋವಿಡ್ ಎರಡನೇ ಅಲೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಸೋಂಕು ತಡೆಗೆ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಘೋಷಿಸಿ ಇದೀಗ ಲಾಕ್ಡೌನ್ ಜಾರಿ ಮಾಡಿದೆ. ಪರಿಣಾಮ ಅನೇಕ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ.
ಆದ್ರೆ ನಿರ್ಮಾಣ ಕಾಮಗಾರಿಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ಇದ್ದರೂ, ಕೆಲವೆಡೆ ಮಾತ್ರ ಕಾಮಗಾರಿಗಳು ನಡೆಯುತ್ತಿವೆ. ಇನ್ನೂ ಹಲವೆಡೆ ಅಮೆಗತಿಯಲ್ಲಿ ಕೆಲಸ ನಡೆಯುತ್ತಿದ್ದರೆ, ಒಂದಿಷ್ಟು ಪ್ರದೇಶಗಳಲ್ಲಿ ಕಾಮಗಾರಿಗಳು ಚುರುಕುಗೊಂಡಿವೆ.
ರಾಜ್ಯದಲ್ಲಿ ಕೆಲಸ ಮಾಡುವ ಅನೇಕ ಕೂಲಿ ಕಾರ್ಮಿಕರು ಹೊರ ರಾಜ್ಯದವರೇ ಆಗಿದ್ದಾರೆ. ಪಂಚ ರಾಜ್ಯ ಚುನಾವಣೆಯ ಮತದಾನಕ್ಕೆ ಹೋದವ್ರು ಇನ್ನೂ ವಾಪಸಾಗಿಲ್ಲ. ಕೋವಿಡ್, ಲಾಕ್ಡೌನ್ ಭೀತಿಯಿಂದಲೇ ಹೋದವ್ರು ಅದೆಷ್ಟೋ ಮಂದಿ. ಇದೀಗ ಕರ್ನಾಟಕ ಸೇರಿದಂತೆ ಹೆಚ್ಚು ಕಡಿಮೆ ದೇಶವ್ಯಾಪಿ ಲಾಕ್ಡೌನ್ ಜಾರಿಯಲ್ಲಿದೆ. ಹಾಗಾಗಿ ಬೆಂಗಳೂರಿನ ಅನೇಕ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಉಂಟಾಗಿದೆ.
ಮಂಗಳೂರಿನಲ್ಲೂ ಇದೇ ಪರಿಸ್ಥಿತಿ. ವಿವಿಧ ಕಾರಣಗಳಿಂದ ತವರಿಗೆ ಮರಳಿದ ಬಹುತೇಕ ವಲಸೆ ಕಾರ್ಮಿಕರು ಹಿಂದಿರುಗದೆ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಎದುರಾಗಿದೆ.
ಬೆಳಗಾವಿಯಲ್ಲಿ ಮಾತ್ರ ವಿವಿಧ ಕಾಮಗಾರಿಗಳಿಗೆ ಲಾಕ್ಡೌನ್ ವರದಾನವಾಗಿದೆ. ಜಿಲ್ಲೆಯಲ್ಲಿ ಅನಗತ್ಯ ಸಂಚಾರಕ್ಕೆ ಬ್ರೇಕ್ ಬಿದ್ದಿದ್ದು, ಸ್ಥಳೀಯ ಕಾರ್ಮಿಕರು ಲಭ್ಯವಿದ್ದಾರೆ. ಹಾಗಾಗಿ ಇಲ್ಲಿನ ಬಹುತೇಕ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿವೆ. ಕೆಲವೆಡೆ ಮಾತ್ರ ಕಾರ್ಮಿಕರಿಗೆ ಅನಾರೋಗ್ಯವಾದ ಪರಿಣಾಮ ಕೆಲವು ಕಾಮಗಾರಿಗಳು ನಿಧಾನಗತಿಯಲ್ಲಿವೆ.
ಲಾಕ್ಡೌನ್ ಬಿಸಿ ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೂ ತಟ್ಟಿದೆ. ಕಾರ್ಮಿಕರ ಅಭಾವದಿಂದ ಕೆಲಸಗಳು ನಿಂತಿವೆ. ವಲಸೆ ಕಾರ್ಮಿಕರು ಸೋಂಕು ತಗುಲುವ ಭೀತಿಯಲ್ಲಿದ್ದಾರೆ. ಹಾಗಾಗಿ ಸೋಂಕು ತಗ್ಗೋವರೆಗೂ ಈ ಸಮಸ್ಯೆ ನಿವಾರಣೆಯಾಗುವಂತೆ ಕಾಣ್ತಿಲ್ಲ.