ಬೆಳಗಾವಿ: ವಿಧಾನಸಭೆ ಕಲಾಪದಲ್ಲಿ ಮಾಟ-ಮಂತ್ರದ ಸ್ವಾರಸ್ಯಕರ ಚರ್ಚೆ ನಡೆಯಿತು. ಬರ ಪರಿಸ್ಥಿತಿ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುವ ಸಂದರ್ಭದಲ್ಲಿ, ಜಿಲ್ಲಾ ಮಂತ್ರಿಗಳು ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಮಾಡಿಲ್ಲ. ಸಿಎಂ ಕನಸಿನ ಯೋಜನೆಯನ್ನು ಮಂತ್ರಿಗಳು ಪಾಲನೆ ಮಾಡುತ್ತಿಲ್ಲ. ಹಾಗಾಗಿ ಸಿಎಂ ಅವರೇ ಏನಾದರೂ ಮಾಡಬೇಕು. ಸಿಎಂ ಸಿದ್ದರಾಮಯ್ಯ ಮೊದಲಿನಂತೆ ಖಡಕ್ ಆಗಿಲ್ಲ ಎಂದರು.
ಹಿಂದೆ ಖಡಕ್ ಆಗಿ ಅಧಿಕಾರಿಗಳಿಗೆ ಚಳಿ ಜ್ವರ ಬಿಡಿಸಿದ್ದನ್ನು ನಾನು ನೋಡಿದ್ದೇನೆ. ಈಗ ಯಾಕೋ ಗರ ಬಡಿದವರಂತೆ ಆಗಿದ್ದಾರೆ. ನಮ್ಮ ಕಡೆ ಗಾಳಿ ಹೊಡೆದೈತೆ ಅಂತಾರೆ. ರೇವಣ್ಣ ಸಿದ್ದರಾಮಯ್ಯನವರಿಗೆ ಒಳ್ಳೆಯ ಸ್ನೇಹಿತರು. ಹಾಗಾಗಿ ರೇವಣ್ಣ ಏನಾದರೂ ಗಾಳಿ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬಿಡಿಸಲು ಆಗುತ್ತಾ ನೋಡಬೇಕು ಎಂದು ಕಾಲೆಳೆದರು.
ಆರ್.ಅಶೋಕ್ ಮಾತಿಗೆ ಎದ್ದು ನಿಂತ ಹೆಚ್.ಡಿ.ರೇವಣ್ಣ, ಸಿದ್ದರಾಮಯ್ಯರಿಗೆ ಯಾರು ಏನು ಮಾಡಿದ್ರೂ ಏನೂ ತಗಲುವುದಿಲ್ಲ. ಅವರಿಗೆ ದೇವರ ಶಕ್ತಿಯಿದೆ. ಯಾರೇ ಮಾಟ-ಮಂತ್ರ ಮಾಡಿಸಿದ್ರೂ ರಿವರ್ಸ್ ಆಗಿ ಮಾಡಿಸಿದವರಿಗೇ ತಗಲುತ್ತದೆ ಎಂದರು. ಆಗ ಆರ್.ಅಶೋಕ್, ಮಾಟ, ಮಂತ್ರ ತಗಲದಂತೆ ಹೋಮ ಮಾಡಿಸಿದ್ದಾರಂತೆ. ಅದು ಕುಮಾರಸ್ವಾಮಿ ಅವರಿಗೆ ಮಾಡಿಸಬೇಕಿತ್ತು ಎಂದು ಕಿಚಾಯಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಸವನಗೌಡ ಪಾಟೀಲ್ ಯತ್ನಾಳ್, ಅವರು ಮಂಕಾಗಿರುವುದರಿಂದ ಬರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಮೊದಲಿನ ಸಿದ್ದರಾಮಯ್ಯ ಆಗಿದ್ದರೆ ಉತ್ತಮ ಆಡಳಿತ ಇರುತ್ತಿತ್ತು. ಸಿದ್ದರಾಮಯ್ಯನವರು ಯಾವುದಕ್ಕೂ ಭಯಪಡಬೇಡಿ. ದೇವರು ನಿಮ್ಮ ಜೊತೆ ಇದ್ದಾನೆ. ನೀವು ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಿರಿ ಎಂದರು.
ಇದನ್ನೂ ಓದಿ: 25 ಸಾವಿರ ಸ್ಮಾರಕಗಳ ರಕ್ಷಣೆಗೆ ಕ್ರಮ, ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ: ಹೆಚ್.ಕೆ.ಪಾಟೀಲ್