ಅಥಣಿ: ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ನ್ಯಾಯಾಲಯ ಹಾಗೂ ಸರ್ಕಾರದ ಅದೇಶ ಮತ್ತು ನಿಯಮಗಳನ್ನು ಸರಿಯಾಗಿ ಪಾಲಿಸದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಅಥಣಿ ಕಬ್ಬು ಬೆಳಗಾರರು ಸಕ್ಕರೆ ಕಾರ್ಖಾನೆ ವಿರುದ್ಧ ಆರೋಪಿಸಿದ್ದಾರೆ.
ಕಳೆದ ನವೆಂಬರ್ ನಿಂದ ಅಥಣಿ ಭಾಗದಲ್ಲಿ ಕಬ್ಬು ಕಟಾವು ಪ್ರಾರಂಭವಾಗಿದೆ, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿರುವ ರೈತನಿಗೆ ಇದುವರೆವಿಗೂ ಕೆಲವು ಕಾರ್ಖಾನೆಗಳು ಸಂಪೂರ್ಣವಾಗಿ ಹಣ ಸಂದಾಯ ಮಾಡುತ್ತಿಲ್ಲ ಹಾಗೂ ಕಬ್ಬಿನ ತೂಕದಲ್ಲಿ ಅನುಮಾನ ಮೂಡುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಷವಿಡೀ ಕಬ್ಬು ಬೆಳೆದು ಒಂದು ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಸಾಲವನ್ನು ಮಾಡಿ ಕಬ್ಬಿನ ಬೆಳೆಗೆ ಬಂಡವಾಳ ಹೂಡಿಕೆ ಮಾಡಲಾಗಿರುತ್ತದೆ. ಸರಿಯಾದ ಸಮಯದಲ್ಲಿ ಸಕ್ಕರೆ ಕಾರ್ಖಾನೆಗಳು ಹಣವನ್ನು ಬಿಡುಗಡೆ ಮಾಡಿದರೆ ನಮ್ಮ ಸಾಲಕ್ಕೆ ಬಡ್ಡಿಯಾದರೂ ಕಡಿಮೆ ಆಗುತ್ತದೆ. ಆದರೆ ಕಾರ್ಖಾನೆ ಆಡಳಿತ ಮಂಡಳಿಗಳು ಕಾಲಕಾಲಕ್ಕೆ ಬಿಲ್ ಬಿಡುಗಡೆ ಮಾಡುತ್ತಿಲ್ಲ. ಇದರಿಂದಾಗಿ ರೈತರಿಗೆ ಹೊರೆಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಅವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದ್ದಾರೆ.
ಭಾರತಿ ಕಿಸಾನ್ ಸಂಘದ ಅಥಣಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ಭರಮು ನಾಯಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಕಬ್ಬು ಪೂರೈಸಿದ ರೈತನಿಗೆ ಸಕ್ಕರೆ ಕಾರ್ಖಾನೆಗಳು 14 ದಿನಗಳಲ್ಲೇ ಹಣ ಸಂದಾಯ ಮಾಡಬೇಕೆಂದು ನ್ಯಾಯಾಲಯ ಆದೇಶ ಹೊರಡಿಸಿದೆ. ಆದರೆ ಕೆಲವು ಸಕ್ಕರೆ ಕಾರ್ಖಾನೆಗಳು ತಮಗೆ ತೋಚಿದಂತೆ ಬಿಲ್ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ರೈತರ ಬದುಕು ದುಸ್ತರವಾಗಿದೆ. ಕೂಡಲೇ ಸರ್ಕಾರ ನಿಯಮಗಳನ್ನು ಉಲ್ಲಂಘಿಸುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.