ಬೆಳಗಾವಿ: ಕೋಲಾರ ಚಿನ್ನದ ಗಣಿ ಕಂಪನಿಯ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರದ ವಶಕ್ಕೆ ಪಡೆಯುವ ಕುರಿತು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ. ಎರಡು ಹಂತದಲ್ಲಿ ರಾಜ್ಯದ ಸ್ವಾಧೀನಕ್ಕೆ ಕೈಗೊಳ್ಳುವ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
13 ಸಾವಿರಕ್ಕೂ ಹೆಚ್ಚು ಜಮೀನು ಹಸ್ತಾಂತರ: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪರವಾಗಿ ತಿಪ್ಪೇಸ್ವಾಮಿ ಅವರು ಬಿಜಿಎಂಎಲ್ ಸಂಸ್ಥೆಯ ಬಳಕೆ ಮಾಡದ 967 ಎಕರೆ ಜಾಗದಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ ಮಾಡುವ ಕುರಿತು ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋಲಾರ ಗೋಲ್ಡ್ ಮೈನ್ಗೆ 13 ಸಾವಿರಕ್ಕೂ ಹೆಚ್ಚು ಜಮೀನನ್ನು ಹಸ್ತಾಂತರ ಮಾಡಲಾಗಿತ್ತು ಎಂದರು.
ಭೂಮಿ ಒತ್ತುವರಿಯಾಗಿದೆ: ರೋಗಗ್ರಸ್ಥವಾದ ನಂತರ ಹೆಚ್ಚುವರಿ ಜಮೀನು ಕೆಐಎಡಿಬಿಗೆ ವಾಪಸ್ ಪಡೆಯಲು ಕೇಂದ್ರಕ್ಕೆ ಪತ್ರ ಬರೆದಿದ್ದೆವು. 3,500 ಎಕರೆ ಹೆಚ್ಚುವರಿ ಇರುವ ಜಮೀನು ಮರಳಿ ಕೊಡುವುದಾಗಿ ಕೇಂದ್ರ ತಿಳಿಸಿ, ವಿವರ ಕಳುಹಿಸಲು ಸೂಚಿಸಿತ್ತು. ನಾವು ಸರ್ವೆ ಮಾಡಿಸಿದಾಗ ಬಹಳ ಭೂಮಿ ಒತ್ತುವರಿಯಾಗಿ ಕಟ್ಟಡ ಕಟ್ಟಿದ್ದಾರೆ. ಅವೆಲ್ಲವೂ ಸೇರಿ 12 ಸಾವಿರಕ್ಕೂ ಹೆಚ್ಚಿನ ಎಕರೆ ಭೂಮಿ ಸರ್ವೆ ಮಾಡಿ 3,500 ಎಕರೆ ಜಾಗ ಜಕ್ಕುಬಂದಿ ಆಕಾರದೊಂದಿಗೆ ಕೇಂದ್ರಕ್ಕೆ ಪತ್ರ ಬರೆದಿವು. ಅಲ್ಲಿ ಸಮಿತಿಯಲ್ಲಿ ಕೇವಲ 3,500 ಎಕರೆ ಮಾತ್ರವಲ್ಲ, ಲಯಬಿಲಿಟಿ ಜೊತೆ ಎಲ್ಲವನ್ನೂ ಪಡೆಯಿರಿ ಎಂದಿದ್ದಾರೆ.
ಲಯಬಿಲಿಟಿ ಜಾಸ್ತಿ ಇದೆ: ನಾವು ಎರಡು ಹಂತದಲ್ಲಿ ಕೊಡಿ ಎನ್ನುತ್ತಿದ್ದೇವೆ. ಅಸೆಟ್ಗಿಂತ ಹೆಚ್ಚಿನ ಲಯಬಿಲಿಟಿ ಜಾಸ್ತಿ ಇದೆ. ಅದಕ್ಕಾಗಿ ಸಮಯ ಆಗುತ್ತಿದೆ. ಮೊದಲ ಹಂತ 3,500 ಎಕರೆ ಹಸ್ತಾಂತರ ಮಾಡಿ, ಎರಡನೇ ಹಂತದಲ್ಲಿ ಭೂಮಿ ಬೆಲೆ, ಸ್ವತ್ತು ಇತರೆ ಮೌಲ್ಯೀಕರಣ ಮಾಡೋಣ. ಲಯಬಿಲಿಟಿ ಎಷ್ಟು ಎಂದು ನೋಡಿ ಪಡೆಯೋಣ ಎನ್ನುವ ಮನವಿ ಸಲ್ಲಿಸಿದ್ದೇವೆ. ಹಾಗಾಗಿ ಅದು ಸದ್ಯಕ್ಕೆ ಅಲ್ಲಿಯೇ ನಿಂತಿದೆ ಎಂದು ಮಾಹಿತಿ ನೀಡಿದರು.
ಇಡೀ ದೇಶದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ಕಾರ್ಖಾನೆಗಳಿಗೆ ಹೆಚ್ಚುವರಿಯಲ್ಲಿರುವ ಭೂಮಿ ಬಿಟ್ಟುಕೊಡಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಬೆಮೆಲ್ನಲ್ಲಿ ಹೆಚ್ಚುವರಿ ಭೂಮಿ ಕಂದಾಯ ಇಲಾಖೆಯಲ್ಲಿದೆ. ಆ ಭೂಮಿ ಐಡ್ಲ್ ಆಗಿ ಇರಬಾರದು, ನೇರವಾಗಿ ನಮಗೆ ಹಸ್ತಾಂತರ ಮಾಡಿದರೆ ಕೂಡಲೇ ನಾವು ಅಭಿವೃದ್ಧಿ ಮಾಡಲಿದ್ದೇವೆ. ಕಂದಾಯ ಇಲಾಖೆಯಿಂದ ಕೈಗಾರಿಕೆ ಇಲಾಖೆಗೆ ಬಂದಿಲ್ಲ. ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕೆಜಿಎಫ್ ಚಿನ್ನದ ಗಣಿಯಲ್ಲಿ ಮತ್ತೆ ಬಂಗಾರ ಹೊಳೆಯುವ ಸಾಧ್ಯತೆ.. ಟೆಂಡರ್ ಕರೆದ ಸರ್ಕಾರ
960 ಎಕರೆ ಐಡ್ಲ್ ಆಗಿದೆ. ಯಾವುದೇ ಇಲಾಖೆಗೆ ಹಸ್ತಾಂತರ ಮಾಡಲಿ ಆಕ್ಷೇಪಣೆ ಇಲ್ಲ. ಆದರೆ ಕಂದಾಯ ಇಲಾಖೆ ಮಾಡುತ್ತಿಲ್ಲ. ಸಿಎಂ ಹೇಳಿದರೂ ಇನ್ನು ಹಸ್ತಾಂತರ ಆಗಿಲ್ಲ. ಇದಕ್ಕೆ ಪ್ರತಿಪಕ್ಷ ಸದಸ್ಯರು ಎರಡೂ ಇಲಾಖೆ ನಿಮ್ಮದೇ ಸರ್ಕಾರದ ಇಲಾಖೆಯಲ್ಲವೇ, ಡಬ್ಬಲ್ ಇಂಜಿನ್ ಎನ್ನುತ್ತೀರಾ ಇಲಾಖೆಯಲ್ಲಿ ಮಾತನಾಡಲು ಆಗಲ್ಲವೇ ಎಂದು ಟೀಕಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಿಮ್ಮದೇ ಸರ್ಕಾರ ಕುಳಿತು ಮಾತನಾಡಿ ಸರಿಪಡಿಸಿ. ಸದಸ್ಯರು ಹೇಳಿದ್ದನ್ನು ತಿಳಿದುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಮತ್ತೆ ಆರಂಭಿಸಲು ಸರ್ಕಾರದ ಆಸಕ್ತಿ: 22 ವರ್ಷಗಳ ನಂತರ ವಿಶ್ವಪ್ರಸಿದ್ದ ಕೆಜಿಎಫ್ ಚಿನ್ನದ ಗಣಿಯಲ್ಲಿ ಮತ್ತೆ ಚಿನ್ನ ತೆಗೆಯಲು ಕೇಂದ್ರ ಸರ್ಕಾರ ಮತ್ತೆ ಆಸಕ್ತಿ ವಹಿಸಿದೆ. ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಹೆಗ್ಗಳಿಕೆ ಕೋಲಾರ ಜಿಲ್ಲೆಯ ಕೆಜಿಎಫ್ ಚಿನ್ನದ ಗಣಿಗೆ ಸಲ್ಲುತ್ತದೆ. ನೂರಾರು ವರ್ಷಗಳ ಕಾಲ ಕೆಜಿಎಫ್ ಚಿನ್ನದ ಬೆಳೆ ಬೆಳೆದು ವಿಶ್ವಕ್ಕೆ ಚಿನ್ನವನ್ನು ಕೊಟ್ಟಿದೆ. ಆದರೆ 2001 ರಲ್ಲಿ ಚಿನ್ನದ ಗಣಿಗೆ ಬೀಗ ಹಾಕಲಾಗಿತ್ತು.