ಚಿಕ್ಕೋಡಿ: ಚಿಕ್ಕೋಡಿ ಉಪ ವಿಭಾಗದಲ್ಲಿ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ವೇದಗಂಗಾ, ದೂಧಗಂಗಾ ಹಾಗೂ ಕೃಷ್ಣಾ ನದಿಗಳು ತನ್ನ ಒಡಲನ್ನು ಬಿಟ್ಟು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಕೃಷ್ಣಾ ನದಿ ತೀರದ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಕಾಗವಾಡ ಹಾಗೂ ಅಥಣಿ ತಾಲೂಕಿನ ಗ್ರಾಮಗಳು ಪ್ರವಾಹದ ಆತಂಕದಲ್ಲಿದ್ದು ಈಗಾಗಲೇ ಜಿಲ್ಲಾಡಳಿತ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಿದೆ. ಸದ್ಯ ಕೃಷ್ಣಾ ನದಿಯಲ್ಲಿ 1,50,000 ಕ್ಯೂಸೆಕ್ ನೀರಿನ ಒಳ ಹರಿವು ಇದೆ.
ಕಳೆದೆರೆಡು ದಿನಗಳಿಂದ ಕೊಯ್ನಾ ಜಲಾಶಯದಿಂದ ಒಂದು ಲಕ್ಷ ಅಧಿಕ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಈ ನೀರು ಇಂದು ಕರ್ನಾಟಕಕ್ಕೆ ಬಂದು ತಲುಪಬಹುದಾಗಿದೆ. ಕೃಷ್ಣಾ ನದಿ ಒಳ ಹರಿವು 2.50ಲಕ್ಷ ಕ್ಯೂಸೆಕ್ ದಾಟುವ ಸಂಭವವೂ ಇದೆ. ನಿನ್ನೆ ಕೊಯ್ನಾ ಜಲಾಶಯದಿಂದ 56 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ, ಹೀಗಾಗಿ ರಾಜ್ಯದ ಕೃಷ್ಣಾ ನದಿಯ ತೀರದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದ್ದು, ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಎನ್ ಡಿ ಆರ್ ಎಫ್ ತಂಡವನ್ನ ನಿಯೋಜನೆ ಮಾಡಲಾಗಿದೆ.