ಬೆಳಗಾವಿ: ಒಂದು ದಶಕದ ನಂತರ ಬಹುದಿನಗಳ ಬೇಡಿಕೆಯಿಂದ ರೂಪುಗೊಂಡಿರುವ ಕನ್ನಡ ಭವನ ರಂಗಮಂದಿರದ ಉದ್ಘಾಟನೆ ಇದೇ 27 ಡಿಸೆಂಬರ್ 2022 ರಂದು ಜರುಗಲಿದೆ ಎಂದು ಕನ್ನಡ ಸಾಂಸ್ಕೃತಿಕ ಭವನದ ಅಧ್ಯಕ್ಷರಾದ ಡಾ. ಪ್ರಭಾಕರ ಕೋರೆ ತಿಳಿಸಿದ್ದಾರೆ.
ಸಾಹಿತಿಗಳ, ಕಲಾವಿದರ, ಅಪ್ಪಟ ಕನ್ನಡ ಅಭಿಮಾನಿಗಳ ಕನಸಿನ ಕೂಸು ಬೆಳಗಾವಿಯ ಕನ್ನಡ ಭವನ ರಂಗಮಂದಿರ ಎಲ್ಲರ ಆಸೆಯಂತೆ ಪೂರ್ಣವಾಗಿ ನಿರ್ಮಾಣವಾಗಿ ತಲೆ ಎತ್ತಿ ನಿಂತಿದೆ. ಇದೀಗ ಸದ್ಯದಲ್ಲೇ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಈ ರಂಗಮಂದಿರ ಭವನದ ಉದ್ಘಾಟನ ಕಾರ್ಯಕ್ರಮವು ವಿಜೃಂಭಣೆಯಿಂದ ನೆರೆವೇರಲಿದೆ.
ಎಂಟು ಕೋಟಿ ವೆಚ್ಚದ ರಂಗಮಂದಿರ: ಹೌದು, ಸುಮಾರು ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತ್ಯಾಕರ್ಷಕವಾದ ಕನ್ನಡ ಭವನ ರಂಗಮಂದಿರ ಕಟ್ಟಡ ಉದ್ಘಾಟನೆ ಸಮಾರಂಭ ಮಂಗಳವಾರ ಡಿಸೆಂಬರ್ 27 ರಂದು ನಡೆಯಲಿದ್ದು, ದಿವ್ಯ ಸಾನಿಧ್ಯ ಎಡೆಯೂರು ಜಗದ್ಗುರು ತೋಂಟದಾರ್ಯ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ಅವರು, ಬೆಳಗಾವಿ ಕನ್ನಡ ಭವನ ರಂಗಮಂದಿರದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ಬೆಳಗಾವಿ ನಗರದಲ್ಲಿ ಕನ್ನಡ ರಂಗಮಂದಿರ ಭವನದ ಕುರಿತಾಗಿ ಬಹುದಿನಗಳಿಂದ ಸರ್ಕಾರಕ್ಕೆ ಬೇಡಿಕ್ಕೆ ಇಡಲಾಗಿತ್ತು, ಸದ್ಯ ಈಗ ಎಲ್ಲವೂ ಮುಗಿದು ಉದ್ಘಾಟನೆ ಸಮಾರಂಭದ ಸಮಯ ಬಂದಿದೆ ಎಂದು ಹೇಳಿದರು.
ಹವಾ ನಿಯಂತ್ರಿತ ಭವನ: ಅಲ್ಲದೆ, ಕನ್ನಡ ಭವನದ ರಂಗ ಮಂದಿರವು ವಿಶಾಲವಾದ ಪ್ರಾಂಗಣವನ್ನು ಹೊಂದಿರುವುದರ ಜೊತೆಗೆ ಸಂಪೂರ್ಣ ಹವಾ ನಿಯಂತ್ರಿತವಾಗಿದೆ. ಸುಸಜ್ಜಿತವಾದ ಮುನ್ನೂರಕ್ಕು (300) ಕ್ಕೂ ಹೆಚ್ಚು ಆಸನಗಳನ್ನು ಭವನ ಹೊಂದಿದೆ. ಸಾಹಿತಿಗಳಿಗೆ ಕಲಾವಿದರಿಗೆ ಉಳಿದುಕೊಳ್ಳಲು ಅತಿಥಿ ಕೋಣೆಗಳನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಅತ್ಯಾಧುನಿಕ ತಾಂತ್ರಿಕ ಧ್ವನಿ ವ್ಯವಸ್ಥೆಯೊಂದಿಗೆ ಧ್ವನಿ ಮುದ್ರಣವನ್ನು ಕೂಡ ಹೊಂದಿದೆ.
ಇನ್ನು ಆಕರ್ಷಕವಾದ ಬೆಳಕಿನ ವ್ಯವಸ್ಥೆ, ನೇಪಥ್ಯ ಕೋಣೆಗಳು, ಮುಂಭಾಗದಲ್ಲಿ ಹತ್ತು(10) ಮಳಿಗೆಗಳೆಲ್ಲವು ವಿನೂತನವೆನಿಸಿವೆ. ಕನ್ನಡ ಭವನದ ಹೊರಭಾಗದಲ್ಲಿ ಕಪ್ಪು ಗ್ಲಾಸುಗಳನ್ನು ಬಳಸಲಾಗಿದ್ದು, ಅತ್ಯಾಕರ್ಷಕವೆನಿಸಿದೆ. ಹಿಂಭಾಗದಲ್ಲಿ ವಿಶಾಲವಾದ ವಾಹನ ನಿಲುಗಡೆಗೆ ಸ್ಥಳಾವಕಾಶವನ್ನು ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದಶಕದ ನಂತರ ರೂಪುಗೊಂಡ ರಂಗಮಂದಿರ: ಮುಂದುವರೆದು, ಒಂದು ದಶಕದ ನಂತರ ರೂಪುಗೊಂಡಿರುವ ಕನ್ನಡ ಭವನದ ರಂಗಮಂದಿರದ ಉದ್ಘಾಟನೆ ಇದೇ 27 ಡಿಸೆಂಬರ್ 2022 ರಂದು ಜರುಗುತ್ತಿರುವುದು ಬೆಳಗಾವಿ, ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಸಮಾರಂಭದ ದಿವ್ಯ ಸಾನಿಧ್ಯವನ್ನು ಡಂಬಳ ಗದಗ ತೋಂಟದ ಜಗದ್ಗುರುಗಳಾದ ಪೂಜ್ಯಶ್ರೀ ಡಾ. ಸಿದ್ದರಾಮ ಮಹಾಸ್ವಾಮೀಜಿ ವಹಿಸಲಿದ್ದಾರೆ. ರಂಗಮಂದಿರದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳು: ಹಾಗೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಎಸ್ ಸುನಿಲ್ ಕುಮಾರ್ ಅವರು, ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಬೆಳಗಾವಿ ಸಂಸದೆ ಶ್ರೀಮತಿ ಮಂಗಳಾ ಸುರೇಶ ಅಂಗಡಿ, ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ಬೆಳಗಾವಿ ದಕ್ಷಿಣದ ವಿಧಾನಸಭಾ ಸದಸ್ಯರಾದ ಅಭಯ ಪಾಟೀಲ, ನಟಿ ಶ್ರೀಮತಿ ಗಿರಿಜಾ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಆಗಮಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು, ಕನ್ನಡ ಸಾಂಸ್ಕೃತಿಕ ಭವನದ ಅಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಸಚಿವ ಸ್ಥಾನ ಸಿಗಲಿ, ಬಿಡಲಿ ಪಕ್ಷ ಸಂಘಟನೆ ಮುಖ್ಯ: ರಮೇಶ್ ಜಾರಕಿಹೊಳಿ