ಬೆಳಗಾವಿ : ಲೋಕಸಭೆ ಉಪಚುನಾವಣೆ ಗೆಲ್ಲಲು ಈಗಾಗಲೇ ಎಲ್ಲ ರೀತಿಯಿಂದಲೂ ಪಕ್ಷ ಸಂಘಟನೆ ಮಾಡಿಕೊಳ್ಳಲಾಗಿದ್ದು, ಪಕ್ಷದ ಹೈಕಮಾಂಡ್ ಬಯಸಿದರೆ ಬೆಳಗಾವಿ ಬೈ ಎಲೆಕ್ಷನ್‍ಗೆ ಸ್ಪರ್ಧೆ ಮಾಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ತಾಲೂಕು ಹಾಗೂ ಜಿಲ್ಲಾಮಟ್ಟದ ಪಕ್ಷದ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಪಕ್ಷ ಸಂಘಟನೆಗೆ ಬೇಕಾದ ತಯಾರಿ ಮಾಡಿಕೊಳ್ಳಲಾಗಿದೆ.
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗುವಂತೆ ಸೂಚನೆ ನೀಡಿದ್ರೆ, ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ. ನಾನೇ ಅಭ್ಯರ್ಥಿ ಅಂತಾ ಘೋಷಣೆ ಆದ್ರೆ ಯಮಕನಮರಡಿ ಕ್ಷೇತ್ರದ ಜನರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಕೇಳುತ್ತೇನೆ. ಆದ್ರೆ, ಅಭ್ಯರ್ಥಿ ಆಯ್ಕೆ ಈವರೆಗೂ ಘೋಷಣೆ ಆಗಿಲ್ಲ. ಕ್ಷೇತ್ರದ ಜನರ ಒಪ್ಪಿಗೆ ಪಡೆದುಕೊಂಡೇ ಸ್ಪರ್ಧಿಸುತ್ತೇನೆ ಎಂದರು.
ನಾವು ಜಾತಿ ಆಧಾರದ ಮೇಲೆ ಚುನಾವಣೆ ಎದುರಿಸೋದಿಲ್ಲ. ಪಕ್ಷದ ಆಧಾರದ ಮೇಲೆ ಚುನಾವಣೆ ಮಾಡಲಿಕ್ಕೆ ಆಗೋದಿಲ್ಲ. ಉಪಚುನಾವಣೆಯಲ್ಲಿ ಜಾತಿ, ಧರ್ಮ ಯಾವುದೂ ಅಡ್ಡಿ ಬರೋದಿಲ್ಲ. ನಾನು ಮುಖ್ಯಮಂತ್ರಿ ರೇಸ್‍ನಲ್ಲಿ ಇಲ್ಲ. ನಾನು ಗುಡಿ, ಚರ್ಚ್, ಮಸೀದಿಗೆ ಹೋಗಿದ್ದು ಹೊಸದಲ್ಲ. ಜನರು, ಕಾರ್ಯಕರ್ತರು ಕರೆದಲ್ಲಿಗೆ ಹೋಗಬೇಕಾಗುತ್ತದೆ.
ಯಾರಿಗೆ ಟಿಕೆಟ್ ಕೊಟ್ಟರೆ ಏನಾಗಲಿದೆ ಎನ್ನುವುದು ಚರ್ಚೆಯಾಗಿದೆ. ಅದನ್ನೆಲ್ಲ ನೋಡಿಕೊಂಡೇ ಟಿಕೆಟ್ ನಿರ್ಧಾರ ಆಗಿದೆ. ಪಕ್ಷದ ಆಧಾರದಲ್ಲಿ ಚುನಾವಣೆ ನಡೆಯಲಿದೆ, ಜಾತಿ ಆಧಾರದ ಮೇಲೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು, ಯಮಕನಮರಡಿ ಕ್ಷೇತ್ರಕ್ಕೆ ಯಾರು ಎನ್ನುವುದನ್ನು ಹೇಳಲು ಇನ್ನೂ ಕಾಲಾವಕಾಶ ಇದೆ. ಅದು ಮೂರನೇ ಹಂತದ ನಿರ್ಧಾರವಾಗಿದೆ. ಉಪಚುನಾವಣೆಗೆ ಅವಕಾಶ ಮಾಡಿಕೊಡುವುದು ಸರಿಯಲ್ಲ. ಪಕ್ಷದ ಹಿತದೃಷ್ಟಿಯಿಂದ ಕೆಲವು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.
ಸಿಡಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿಡಿ ಪ್ರಕರಣದಿಂದ ಶಾಸಕ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರಿಗೆ ಹಿನ್ನೆಡೆಯಾಗಿರಬಹುದು. ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಬೆಂಬಲಿಗರು ನಮ್ಮ ಜೊತೆಗಿದ್ದಾರೆ. ಪಕ್ಷದ ಪ್ರಚಾರದಲ್ಲಿ ಸಿಡಿ ವಿಚಾರ ಪ್ರಸ್ತಾಪಿಸುವ ಪ್ರಶ್ನೆಯೇ ಇಲ್ಲ. ತನಿಖೆ ನಡೆಯುತ್ತಿದೆ. ದಿನಕ್ಕೊಂದು ಟ್ವಿಸ್ಟ್ ಎಂದು ಮಾಧ್ಯಮದವರೇ ಹೇಳುತ್ತಿದ್ದೀರಿ. ಇನ್ನು, ನಾವೇನು ಹೇಳೋಣ ಎಂದರು.
ಓದಿ: ದ್ವಿತೀಯ ಪಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೆಬ್ಸೈಟ್ : ಸಿಎಂ ಯಡಿಯೂರಪ್ಪ ಚಾಲನೆ
ಬಿಜೆಪಿ ಸರ್ಕಾರಗಳ ಜನಹಿತ ನಿರ್ಲಕ್ಷ್ಯವೇ ಕಾಂಗ್ರೆಸ್ ಪ್ರಣಾಳಿಕೆಯ ವಿಷಯವಾಗಲಿದೆ. ರೈತ ಕಾಯ್ದೆ, ಪ್ರವಾಹ ಸಂತ್ರಸ್ತರ ಪರಿಹಾರ, ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣ ಹೀಗೆ ನಾನಾ ವೈಫಲ್ಯಗಳನ್ನು ಕಾಂಗ್ರೆಸ್ ಜನರ ಮುಂದಿಟ್ಟುಕೊಂಡು ಮೋದಿ ಮತ್ತು ಯಡಿಯೂರಪ್ಪ ಸರ್ಕಾರವನ್ನ ಟಾರ್ಗೆಟ್ ಮಾಡಿ ಚುನಾವಣೆ ಎದುರಿಸುತ್ತೇವೆ ಎಂದರು.