ಚಿಕ್ಕೋಡಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಬೈಕ್‌ಗೆ ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುತ್ತಿದ್ದ ವಾಹನಗಳ ಬಗ್ಗೆ ನಿಗಾವಹಿಸಿದ ಪೊಲೀಸರು, ಖದೀಮರನ್ನು ಬಂಧಿಸಿ ವಿಚಾರಿಸಿದಾಗ ಬೈಕ್ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪೃವೃತ್ತರಾದ ಪೊಲೀಸರು, ಜಿಲ್ಲೆಯಲ್ಲಿ ಬೈಕ್ ಕಳ್ಳತನ ಬಗ್ಗೆ ಮಾಹಿತಿ ಕಲೆ ಹಾಕಿ ಚಾಲಾಕಿ ಖದೀಮರನ್ನು ಸೆರೆ ಹಿಡಿದಿದ್ದು, ಸುಮಾರು ₹6.24 ಲಕ್ಷ ಬೆಲೆ ಬಾಳುವ 15 ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ದಾವೂದ್ ಖುದಾಸಾಬ ಸರಕಾವಾಸ, ಸಾವಳಗಿ ಗ್ರಾಮದ ಮಹೇಶ್ ಬಸಪ್ಪಾ ಮಗದುಮ್ ಹಾಗೂ ಹುಕ್ಕೇರಿ ಗಾಂಧಿ ನಗರ ನಿವಾಸಿ ಶಿವಾನಂದ ಮಹಾದೇವ ಚೌಗಲಾ ಬಂಧಿತ ಆರೋಪಿಗಳು.
ಗೋಕಾಕ್, ಹುಕ್ಕೇರಿ, ಬೆಳಗಾವಿ, ಜಮಖಂಡಿ, ನೇಸರಗಿ, ಹಾರೂಗೇರಿ, ಘಟಪ್ರಭಾ, ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಖದೀಮರು, ಬೈಕಿನ ನಂಬರ್ ಪ್ಲೇಟ್ಗಳನ್ನು ತೆಗೆದು ಬಳಿಕ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.