ಬೆಳಗಾವಿ : ನಗರ ವ್ಯಾಪ್ತಿಯಲ್ಲಿ ಹಲವು ಬೃಹತ್ ಮರಗಳು ಉರುಳುವ ಹಂತ ತಲುಪಿದ್ದು, ಈ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಹಿಂದೆ ಬಿರುಗಾಳಿ ಸಹಿತ ಭಾರಿ ಮಳೆಗೆ ನಗರ ವ್ಯಾಪ್ತಿಯಲ್ಲಿ ಹಲವು ಕಡೆ ಮರಗಳು ಉರುಳಿ ಜೀವಹಾನಿ ಸಂಭವಿಸಿತ್ತು. ಆದರೂ ಅರಣ್ಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ 2022ರ ಸೆಪ್ಟೆಂಬರ್ನಲ್ಲಿ ಬೆಳಗಾವಿ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿತ್ತು. ಸೆಪ್ಟೆಂಬರ್ 13ರಂದು ಭಾರಿ ಮಳೆಗೆ ನಗರದ ಆರ್ಟಿಓ ವೃತ್ತದ ಬಳಿಯ ಕೋರ್ಟ್ ರಸ್ತೆಯಲ್ಲಿ ಹಳೆ ಮರವೊಂದು ಬೈಕ್ ಮೇಲೆ ಹೋಗುತ್ತಿದ್ದ ರಾಕೇಶ್ ಎಂಬವರ ಮೇಲೆ ಬಿದ್ದಿತ್ತು. ಇದರಿಂದಾಗಿ ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆ ಬಳಿಕ ಜೀವಹಾನಿಗೆ ಕಾರಣವಾಗುವ ಹಳೆ ಮರಗಳನ್ನು ಗುರುತಿಸಿ ತೆರವುಗೊಳಿಸುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕಿತ್ತು. ಆದರೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತದೇ ಕೋರ್ಟ್ ರಸ್ತೆಯಲ್ಲಿ ಮತ್ತೊಂದು ಹಳೆ ಮರ ಧರೆಗುರುಳುವ ಹಂತದಲ್ಲಿದೆ. ಈ ಮರದ ದೊಡ್ಡ ಕೊಂಬೆಯೊಂದು ಜೋರಾದ ಗಾಳಿ ಬೀಸಿದರೆ ನೆಲಕ್ಕುರುಳುವ ಸಾಧ್ಯತೆ ಇದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಜನ ಓಡಾಡುತ್ತಾರೆ. ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲಾ, ಕಾಲೇಜುಗಳಿಗೆ ತೆರಳುತ್ತಾರೆ. ಅಲ್ಲದೆ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ, ಕೋರ್ಟ್ಗೆ ಇದೇ ರಸ್ತೆಯನ್ನು ಉಪಯೋಗಿಸುತ್ತಾರೆ. ಆದ್ದರಿಂದ ಈ ಮರವನ್ನೂ ಅನಾಹುತ ಸಂಭವಿಸುವುದಕ್ಕೆ ಮುನ್ನ ತೆರವುಗೊಳಿಸಬೇಕಾಗಿದೆ ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರಾದ ವೀಣಾ ಕೇಳ್ಕರ್, ಹೋದ ವರ್ಷ ನನ್ನ ಕಣ್ಣ ಮುಂದೆಯೇ ಯುವಕನೋರ್ವ ಮರ ಬಿದ್ದು ಸಾವನ್ನಪ್ಪಿದ್ದ. ಈ ರಸ್ತೆಯಲ್ಲಿ ಮಕ್ಕಳು ಸೇರಿ ಬಹಳಷ್ಟು ಜನ ಓಡಾಡುತ್ತಿರುತ್ತಾರೆ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ, ನಗರದಲ್ಲಿ ಎಲ್ಲೆಲ್ಲಿ ಒಣಗಿದ ಮರಗಳಿವೆಯೋ ಅವುಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ವಿಠಲ ಕೇಳ್ಕರ್ ಮಾತನಾಡಿ, ಈ ಮರ ಸಂಪೂರ್ಣವಾಗಿ ಒಣಗಿಹೋಗಿದೆ. ಇದು ಜನನಿಬೀಡ ರಸ್ತೆಯಾಗಿದ್ದು, ಸುತ್ತಮುತ್ತಲೂ ಶಾಲಾ ಕಾಲೇಜುಗಳಿವೆ. ಹಾಗಾಗಿ, ಅನಾಹುತ ಸಂಭವಿಸುವ ಮೊದಲೇ ಈ ಮರವನ್ನು ತೆರವುಗೊಳಿಸುವ ಕೆಲಸವನ್ನು ಮಾಡಬೇಕು ಎಂದರು. ನ್ಯಾಯವಾದಿ ರವೀಂದ್ರ ಇಂಗಳಗಿ ಮಾತನಾಡಿ, ಮಹಾನಗರ ಪಾಲಿಕೆ ಅಧಿಕಾರಿಗಳು ಬೆಳಗಾವಿಯಲ್ಲಿ ಅಪಾಯದ ಅಂಚಿನಲ್ಲಿರುವ ಗಿಡಮರಗಳನ್ನು ಮೊದಲು ಗುರುತಿಸಬೇಕು. ಬಳಿಕ ಅವುಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಈ ಮೂಲಕ ಸಂಭವನೀಯ ಪ್ರಾಣಹಾನಿ ಮತ್ತು ಅನಾಹುತವನ್ನು ತಪ್ಪಿಸಬೇಕು ಎಂದು ಹೇಳಿದರು.
ಇದನ್ನೂ ಓದಿ : ಶಿವಮೊಗ್ಗ: ರಾಜ್ಯವನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಧರಣಿ