ಬೆಳಗಾವಿ: ಈ ಪಟ್ಟಣದ ಸುಮಾರು 30 ನಿರ್ಗತಿಕ ಕುಟುಂಬಗಳು ಅನ್ನ ನೀರಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಈಟಿವಿ ಭಾರತ ಸವಿಸ್ತಾರವಾಗಿ ವರದಿ ಮಾಡಿದ ಬೆನ್ನಲ್ಲೆ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಪರಿಹಾರದ ಮಹಾಪೂರವೇ ಹರಿದು ಬಂದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಮಾಯಕ್ಕ ದೇವಿ ದೇವಸ್ಥಾನದ ಸುತ್ತಮುತ್ತ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಅದರಲ್ಲಿ ಹೆಳವರು, ಬಹುರೂಪಿ, ಕೊಂಚಿ ಕೊರವರ, ಚಿಕ್ಕಲಗಾರ ಸುಮುದಾಯದ ಕುಟುಂಬಗಳು ಆಹಾರಕ್ಕಾಗಿ ಪರದಾಟ ನಡೆಸುತ್ತಿದ್ದರು. ಆದರೆ, ಯಾವುದೇ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಕ್ಯಾರೇ ಎನ್ನಲಿಲ್ಲ. ಈ ಬಗ್ಗೆ ಈಟಿವಿ ಭಾರತ ಸುದ್ದಿ ಪ್ರಕಟಿಸಿದಾಗ ಹುಕ್ಕೇರಿ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ ಶಾಖಾ ಮಠವಾದ ರಾಯಬಾಗ ಮಠದ ವತಿಯಿಂದ ದಿನನಿತ್ಯ ಬಳಕೆ ಸಾಮಗ್ರಿಗಳನ್ನು ನೀಡಿ ನೆರವಾಗಿದ್ದಾರೆ.
ಹುಕ್ಕೇರಿ ಹಿರೇಮಠದಿಂದ ಅಕ್ಕಿ, ಸಕ್ಕರೆ, ಈರುಳ್ಳಿ, ಟೀ ಪುಡಿ, ಅಡುಗೆ ಎಣ್ಣೆ, ಹಿಟ್ಟು ಸೇರಿ ಸುಮಾರು 12 ತರಹದ ಅಡುಗೆ ಸಾಮಗ್ರಿಗಳನ್ನು ನೀಡಲಾಗಿದೆ. ಜೊತೆಗೆ ಚಿಂಚಲಿ ಪಟ್ಟಣ ಪಂಚಾಯಿತಿಯಿಂದ ತೊಗರಿಬೇಳೆ, ಅಕ್ಕಿ, ಅಡುಗೆ ಎಣ್ಣೆ ಸೇರಿ ಎಂಟು ತರಹದ ಸಾಮಗ್ರಿಗಳನ್ನು ವಿತರಿಸಲಾಗಿದೆ. ಇನ್ನೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್ತಿನ ಅಬ್ಬಾಸ್ ಮುಲ್ಲಾ ಬಾಳೆ ಹಣ್ಣು, ಪಲವು, ಕುಡಿಯುವ ನೀರಿನ ಬಾಟಲ್ ಸೇರಿ ಇನ್ನಿತರ ಸಾಮಗ್ರಿಗಳನ್ನು ಜನರಿಗೆ ನೀಡಿದ್ದಾರೆ.
ಇನ್ನು ಇವರೆಲ್ಲರ ನೆರವಿನಿಂದ ನಿಟ್ಟುಸಿರು ಬಿಡುವಂತಾಗಿದೆ. ಈ ಸಹಾಯದಿಂದ ನಮ್ಮ ಕುಟುಂಬಗಳಿಗೆ ಅನಕೂಲವಾಗಿದೆ. ತುತ್ತು ಅನ್ನಕ್ಕಾಗಿ ಪರದಾಡುವ ಸಮಯದಲ್ಲಿ ನಮಗೆ ಸಹಾಯ ಹಸ್ತ ಚಾಚಿದ ಸ್ವಾಮೀಜಿಗೆ ಹಾಗೂ ವಿವಿಧ ಸಂಘಗಳಿಗೆ ಧನ್ಯವಾದ ಎಂದು ಅಲ್ಲಿನ ಬಡ ಕುಟುಂಬಗಳು ಸಂತಸ ಹಂಚಿಕೊಂಡಿವೆ.