ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿಗೆ ಹೈಕೋರ್ಟ್ ಜಡ್ಜ್ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಬಿ. ವೀರಪ್ಪ ದಿಢೀರ್ ಭೇಟಿ ನೀಡಿ, ಸುದೀರ್ಘ ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು. ಜೈಲಿನೊಳಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಅವರು, ಜೈಲು ಸಿಬ್ಬಂದಿ ವಿರುದ್ಧ ಗರಂ ಆದರು. ಜೈಲಿನಲ್ಲಿನ ಅವ್ಯವಸ್ಥೆಗೆ ನ್ಯಾಯಾಧೀಶ ಬಿ. ವೀರಪ್ಪ ಇಲ್ಲಿನ ಮೇಲಧಿಕಾರಿಗಳಿಗೆ ಛೀಮಾರಿ ಹಾಕಿದರು.
ನ್ಯಾಯಾಧೀಶ ಬಿ. ವೀರಪ್ಪ ದಿಢೀರ್ ಭೇಟಿಗೆ ಜೈಲು ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ನಾಲ್ಕು ಗಂಟೆಗಳ ಕಾಲ ಜೈಲಲ್ಲೇ ಉಳಿದ ಜಡ್ಜ್ ಅವ್ಯವಸ್ಥೆ ಪರಿಶೀಲನೆ ನಡೆಸಿದರು. ಜೈಲಿನ ಊಟದ ಕೋಣೆ ಪರಿಶೀಲನೆ ನಡೆಸಿದ ಅವರು, ಕೈದಿಗಳಿಗೆ ನೀಡುವ ರೊಟ್ಟಿಯನ್ನು ನೆಲದ ಮೇಲೆ ಇಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ವಿಶೇಷ ಅನುದಾನ ಕೋರಿದ್ದೇವೆ ಎಂದು ಸಬೂಬು ಹೇಳಲು ಹೊರಟ ಜೈಲು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲದೇ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಜಡ್ಜ್ ವೀರಪ್ಪ ಸರ್ಕಾರಕ್ಕೆ ಒತ್ತಾಯಿಸಿದರು. ಜೈಲು ಅವ್ಯವಸ್ಥೆ ಸುಧಾರಣೆಗೆ ಒಂದು ತಿಂಗಳು ಗಡುವು ನೀಡಿದ ಅವರು, ತಿಂಗಳಲ್ಲಿ ಮತ್ತೆ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಎಂದರು. ಬಳಿಕ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿಯೂ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಳೆ ಬಂತು ಅಂತ ಈಗ ಬಿಜೆಪಿಯವರು ಛತ್ರಿ ಕೆಳಗೆ ನಿಂತು ಪರಿಶೀಲಿಸಿದರೆ ಏನು ಪ್ರಯೋಜನ: ಡಿಕೆಶಿ