ಬೆಳಗಾವಿ: ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡವನ್ನು ತ್ರಿವಳಿ ನಗರ ಮಾಡಲು ಅನುಕೂಲವಾಗಿರುವ ಹಾಗೂ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಧಾರವಾಡ ರೈಲು ಮಾರ್ಗ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಕುರಿತು ಬೆಳಗಾವಿಯ ಕಾಡಾ ಕಚೇರಿಯಲ್ಲಿ ಮಾಹಿತಿ ನೀಡಿದ ಕೇಂದ್ರ ರೈಲ್ವೆ ಇಲಾಖೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಬೆಳಗಾವಿ ಧಾರವಾಡ-ಕಿತ್ತೂರು 73 ಕಿ.ಮೀ ರೈಲು ಮಾರ್ಗ ಯೋಜನಾ ವರದಿಗೆ ಒಪ್ಪಿಗೆ ದೊರೆತಿದೆ. 927.40 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಸಂಸತ್ ಅಧಿವೇಶನ ಬಳಿಕ ಈ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಬೆಂಗಳೂರಿನಲ್ಲಿ ಸಭೆ ನಡೆಸಿದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು. ಉತ್ತರ ಕರ್ನಾಟಕ ಭಾಗದ ದಶಕದ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎಂದರು.
ಬೆಳಗಾವಿ - ಧಾರವಾಡ ಮಧ್ಯೆ ಒಟ್ಟು 11 ನಿಲ್ದಾಣಗಳು ಬರಲಿವೆ. ಬೆಳಗಾವಿ, ದೇಸೂರ, ಕಣವಿಕರವಿನಕೊಪ್ಪ, ಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ, ಹುಲಿಕಟ್ಟಿ, ಕಿತ್ತೂರು, ತೇಗೂರು, ಮಮ್ಮಿಗಟ್ಟಿ, ಕ್ಯಾರಕೊಪ್ಪ ಮಾರ್ಗವಾಗಿ ರೈಲು ಧಾರವಾಡ ತಲುಪಲಿದೆ.
ಹೊಸ ಮಾರ್ಗಕ್ಕೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ನೀಡಲು ಈಗಾಗಲೇ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದರು. ಈ ಮೊದಲು ಬೆಳಗಾವಿಯಿಂದ ಧಾರವಾಡಕ್ಕೆ ಹೋಗಲು ಎರಡೂವರೆಯಿಂದ ಮೂರು ಗಂಟೆ ಸಮಯ ಹಿಡಿಯುತ್ತಿತ್ತು. ನೂತನ ಮಾರ್ಗದಿಂದ ಕೇವಲ 1 ಗಂಟೆಯಲ್ಲಿ ಬೆಳಗಾವಿಯಿಂದ ಧಾರವಾಡ ತಲುಪಬಹುದಾಗಿದೆ.
ಯೋಜನೆಗೆ ಜಾರಿಗೆಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಷ್ ಗೋಯಲ್‌ಗೆ ಈ ಭಾಗದ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.