ಬೆಳಗಾವಿ: ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧರೊಬ್ಬರಿಗೆ ಸ್ವಗ್ರಾಮದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದೆ.
ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಅಜೀತ ಶಂಕರ ಮಗದುಮ್ಮ ಎಂಬುವವರು ಸೇನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಅವರಿಗೆ ತೆರೆದ ವಾಹನದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಪುಷ್ಪವೃಷ್ಟಿಯ ಮೂಲಕ ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದ್ರು.
ಗ್ರಾಮದ ಬೀರೇಶ್ವರ ಮಂದಿರದಿಂದ ಮೆರವಣಿಗೆ ಮುಖಾಂತರ ಬರಮಾಡಿಕೊಂಡರು. ಬಳಿಕ ಡೋಣವಾಡದ ದುರದುಂಡೇಶ್ವರಮಠದ ಶಿವಾನಂದ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು. ಸೇವಾ ನಿವೃತ್ತಿ ಹೊಂದಿದ ಸೈನಿಕ ಅಜೀತ್ ಮಗದುಮ್ಮ ಅವರಿಗೆ ಶಿವಾನಂದ ಮಹಾಸ್ವಾಮಿಗಳು ಸನ್ಮಾನಿಸುವ ಮೂಲಕ ಆಶೀರ್ವದಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿಗಳು, ದೇಶಕ್ಕೆ ಇಬ್ಬರು ಬೆನ್ನುಲುಬುಗಳಿದ್ದು, ಒಬ್ಬರು ದೇಶ ಕಾಯುವ ಸೈನಿಕರು ಮತ್ತು ದೇಶಕ್ಕೆ ಅನ್ನ ಕೊಡುವ ರೈತರು ಎಂದರು. ದೇಶ ಕಾಯುವ ಸೈನಿಕರು ಪ್ರತಿಯೊಂದು ಮನೆಯಲ್ಲಿಯೂ ಹುಟ್ಟಬೇಕು.
ಪ್ರತಿಯೊಬ್ಬ ತಂದೆ-ತಾಯಂದಿರು ಮಕ್ಕಳಲ್ಲಿ ದೇಶಾಭಿಮಾನ ಬೆಳೆಸುವ ಮುಖಾಂತರ ತಮ್ಮ ಮಕ್ಕಳನ್ನು ಸೈನಿಕರನ್ನಾಗಿಸಲು ಮುಂದಾಗಬೇಕು. ತಾಯಿ ಭಾರತಾಂಬೆಯ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ, ಅದಕ್ಕೂ ಯೋಗಬೇಕು. ಆ ಯೋಗ ಅಜೀತ್ ಶಂಕರ ಮಗದುಮ್ಮ ಅವರಿಗೆ ದೊರಕಿರುವುದು ಹೆಮ್ಮಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ವೀರಯೋಧ ಅಜೀತಶಂಕರ ಮಗದುಮ್ಮ ಮಾತನಾಡಿ, ತಂದೆ - ತಾಯಿ, ಗ್ರಾಮದ ಗುರು ಹಿರಿಯರ ಆಶೀರ್ವಾದದಿಂದ ನಾನು 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ ಎಂದು ಹೇಳಿದರು.