ಬೆಳಗಾವಿ: ಜಾಗ ಖರೀದಿಗಾಗಿ ಕೊಟ್ಟ ಹಣವನ್ನು ಹಿಂದಿರುಗಿಸಲು ಹೇಳಿದ ಹಿನ್ನೆಲೆ ಉದ್ಯಮಿಯನ್ನೇ ವೈದ್ಯ ಹತ್ಯೆ ಮಾಡಿರುವ ಆರೋಪ ಪ್ರಕರಣ ಗೋಕಾಕ್ ತಾಲೂಕಿನಲ್ಲಿ ನಡೆದಿದೆ. ರಾಜು ಝಂವರ್ ಹತ್ಯೆಯಾದ ವ್ಯಕ್ತಿ. ವೈದ್ಯ ಸಚಿನ್ ಕೊಲೆ ಮಾಡಿದ ಆರೋಪಿ. ಫೆ.10ರ ರಾತ್ರಿಯಿಂದ ರಾಜು ನಾಪತ್ತೆಯಾಗಿದ್ದರು. ಈ ಬಗ್ಗೆ ರಾಜು ಝಂವರ್ ಕುಟುಂಬಸ್ಥರು ನಗರ ಠಾಣೆಯಲ್ಲಿ ದೂರನ್ನು ನೀಡಿದ್ದರು. ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ರಾಜು ಮೊಬೈಲ್ ಸಂಖ್ಯೆಗೆ ಕೊನೆಯದಾಗಿ ಕರೆ ಮಾಡಿದವರನ್ನು ಕರೆದು ವಿಚಾರಣೆ ನಡೆಸಿದ್ದರು. ರಾಜುಗೆ ಕೊನೆಯದಾಗಿ ವೈದ್ಯ ಸಚಿನ್ ಶಿರಗಾವಿ ಅವರು ಕರೆ ಮಾಡಿದ್ದ ಹಿನ್ನೆಲೆ ಕರೆದು ವಿಚಾರಣೆ ನಡೆಸಿದಾಗ ಮೂವರು ಯುವಕರ ಜೊತೆ ಸೇರಿ ರಾಜು ಝಂವರ್ನ ಹತ್ಯೆಗೈದು ಕಾಲುವೆಗೆ ಎಸೆದಿರುವ ಬಗ್ಗೆ ಆರೋಪಿ ಸಚಿನ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ.. ಉದ್ಯಮಿ ರಾಜು ಅವರು ಜಾಗ ಖರೀದಿಗಾಗಿ ವೈದ್ಯ ಸಚಿನ್ ಅವರಿಗೆ ಹಣ ನೀಡಿದ್ದರು. ಬಳಿಕ ಕೊಟ್ಟ ಹಣವನ್ನು ಹಿಂದಿರುಗಿಸಲು ಕೇಳಿದ್ದಾರೆ. ಫೆ.10ರ ರಾತ್ರಿ ಉದ್ಯಮಿ ರಾಜು ಝಂವರ್ಗೆ ಹಣ ನೀಡುವುದಾಗಿ ವೈದ್ಯ ಸಚಿನ್ ತಮ್ಮ ಆಸ್ಪತ್ರೆಗೆ ಕರೆಸಿಕೊಂಡಿದ್ದರಂತೆ. ಬಳಿಕ ಆಮ್ಲೆಟ್ ತಿಂದು ಬರೋಣ ಎಂದು ರಾಜು ಅವರನ್ನು ಯೋಗಿಕೊಳ್ಳ ಮಾರ್ಗದ ಬಳಿ ಕರೆದುಕೊಂಡು ಹೋಗಲಾಗಿದೆ. ಮಾರ್ಕಂಡೇಯ ನದಿ ದಡದಲ್ಲಿ ಕರೆದೊಯ್ದು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿ ನಂತರ ಶವವನ್ನು ಕೊಳವಿ ಬಳಿ ಘಟಪ್ರಭಾ ಎಡದಂಡೆ ಕಾಲುವೆಗೆ ಎಸೆದು ಪರಾರಿಯಾಗಿರುವ ಬಗ್ಗೆ ಆರೋಪಿ ವಿಚಾರಣೆಯಲ್ಲಿ ಬಾಯ್ಬಿಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಉದ್ಯಮಿ ರಾಜು ಝಂವರ್ ಮೃತ ದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಪತ್ನಿಯ ಕತ್ತು ಸೀಳಿ ಹತ್ಯೆ ಮಾಡಿದ ಪತಿ; ಹಾಡಹಗಲೇ ಅಶೋಕನಗರ ವ್ಯಾಪ್ತಿಯಲ್ಲಿ ಘಟನೆ
ಬೆಂಗಳೂರು: ಪತ್ನಿಯನ್ನೇ ಕೊಂದ ಪತಿ.. ಪತ್ನಿಯನ್ನೇ ಕತ್ತು ಸೀಳಿ ಪತಿ ಕೊಲೆ ಮಾಡಿರುವ ಘಟನೆ ಅಶೋಕನಗರ ಠಾಣಾ ವ್ಯಾಪ್ತಿಯ ನಂಜಪ್ಪ ಸರ್ಕಲ್ ಬಳಿಯ ಮನೆಯೊಂದರಲ್ಲಿ ಸೋಮವಾರ ನಡೆದಿದೆ. ಮುಬೀನ್ ಕೌಸರ್ (34) ಗಂಡನಿಂದಲೇ ಕೊಲೆಯಾದ ಮಹಿಳೆ. ಕೌಟುಂಬಿಕ ಕಾರಣಗಳಿಂದ ಗಂಡನಿಂದ ದೂರವಾಗಿದ್ದ ಮುಬಿನ್ ಪ್ರತ್ಯೇಕವಾಗಿ ವಾಸಿ ಮಾಡುತ್ತಿದ್ದರು. ಮುಬಿನ್ ವಾಸವಿದ್ದ ಮನೆಗೆ ಪತಿ ಬಂದಿದ್ದರು. ಪತಿ ಬಂದ ಕೂಡಲೇ ಮನೆಯ ಬಾಗಿಲ ಬಳಿಯೇ ದಂಪತಿ ನಡುವೆ ಜಗಳ ಆರಂಭವಾಗಿತ್ತು. ಜಗಳವಾಡುತ್ತಲೇ ಆರೋಪಿ ತನ್ನ ಹೆಂಡತಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಬಾಗಿಲ ಹೊಸ್ತಿಲಲ್ಲೇ ಬಿದ್ದು ಮುಬಿನ್ ಪ್ರಾಣ ಬಿಟ್ಟಿದ್ದಾರೆ. ಹತ್ಯೆಯ ಬಳಿಕ ಆಕೆಯ ಪತಿ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯವನ್ನು ತಿಳಿದ ಅಕ್ಕಪಕ್ಕದವರು ಕೂಡಲೇ ಅಶೋಕನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಶ್ವಾನದಳ ಮತ್ತು ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಹಬ್ಬದ ಸಂಭ್ರಮದಲ್ಲೇ ಪತ್ನಿಯ ಕತ್ತು ಸೀಳಿದ ವೃದ್ಧ: 50 ವರ್ಷಗಳ ಸಂಸಾರ ದುರಂತ ಅಂತ್ಯ!