ಬೆಳಗಾವಿ: ಸರ್ಕಾರ ಉರುಳಿಸುವ ಶಕ್ತಿ ಹೊಂದಿರುವ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಕ್ಷೇತ್ರದ ಗ್ರಾಮಗಳಿಗೆ ಬಸ್ ಬಿಡಿಸುವ ಶಕ್ತಿ ಇಲ್ಲ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
ಗೋಕಾಕ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಸರ್ಕಾರ ಬೀಳಿಸುವ ಶಕ್ತಿ ರಮೇಶ್ ಜಾರಕಿಹೊಳಿ ಬಳಿ ಇದೆ. ಆದ್ರೆ ಗ್ರಾಮಗಳಿಗೆ ಒಂದು ಬಸ್ ಬಿಡಿಸುವ ಶಕ್ತಿ ಇವರಿಲ್ಲ. ಹೀಗಾಗಿ ಎಷ್ಟೋ ಊರುಗಳಿಗೆ ಬಸ್ ಸಂಪರ್ಕ ಇಲ್ಲ, ಕುಡಿಯಲು ನೀರಿನ ವ್ಯವಸ್ಥೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ರಮೇಶ್ ಜಾರಕಿಹೊಳಿ ವಿರುದ್ಧ. ರಮೇಶ್ ಜಾರಕಿಹೊಳಿ ಕೆಳಗಿದ್ದ ಬೆಂಬಲಿಗರು ಬೀಟ್ ಪೊಲೀಸರಿದ್ದ ಹಾಗೆ. ಈ ಬೀಟ್ ಪೊಲೀಸರು ಪಿಎಸ್ಐ ಅವರನ್ನು ಭೇಟಿ ಆಗೋಕೆ ಬಿಡೋದಿಲ್ಲ. ರಮೇಶನ ಪರಿಸ್ಥಿತಿ ಕೂಡ ಹೀಗೆ ಇದೆ. ಯಾವುದೇ ಪಕ್ಷದ ಶಾಸಕರಾದವರು ಎಲ್ಲ ಜನರಿಗೆ ಸಿಗುವಂತಿರಬೇಕು. ಈಗ ಐದು ಊರಲ್ಲಷ್ಟೇ ರಮೇಶ್ ಆಪ್ತರು ಜಾಸ್ತಿ ಇದ್ದಾರೆ. ಉಳಿದ ಎಲ್ಲ ಕಡೆ ಅವರನ್ನು ಮುಗಿಸಿದ್ದೇವೆ ಎಂದರು.
ರಮೇಶ ಜಾರಕಿಹೊಳಿ ಬಳಿ ಹೇಳಿಕೊಳ್ಳುವಂತಹ ಬ್ಯುಸಿನೆಸ್ ಇಲ್ಲ, ಸಮಾಜಸೇವೆಯನ್ನೂ ಮಾಡಲ್ಲ. ಆದರೂ ಬ್ಯೂಸಿ ಇರ್ತಾರೆ. ಮಂತ್ರಿ ಆದಾಗ ರಮೇಶ್ ಜಾರಕಿಹೊಳಿ ಒಂದೇ ಒಂದು ಕೆಡಿಪಿ ಮೀಟಿಂಗ್ ಮಾಡಲಿಲ್ಲ. ಲೂಟ್ ಮಾಡುವ ಗ್ಯಾಂಗ್ ಇಟ್ಟುಕೊಂಡಿದ್ದಾರೆ. ಅರ್ಧಪಾಲು ಇವರಿಗೆ, ಅರ್ಧಪಾಲು ಅವರಿಗೆ, ಮುಸ್ಲಿಮರಿಗೆ ಒಂದು ಶಾದಿಮಹಲ್ ಕಟ್ಟಲಿಕ್ಕೆ ಇವರಿಂದ ಆಗಲಿಲ್ಲ ಎಂದು ಟೀಕಿಸಿದರು.
ಹಿಂದಿನ ಚುನಾವಣೆಯಲ್ಲಿ ಇದೇ ರಮೇಶ ಜಾರಕಿಹೊಳಿ ಮೋದಿ, ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮೋದಿ ಸಹ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಅಭಿವೃದ್ಧಿಗಾಗಿ ರಮೇಶ ಬಿಜೆಪಿಗೆ ಬಂದಿದ್ದೇನೆ ಅಂತಾರೆ. ಆದರೆ ಯಾರ ಅಭಿವೃದ್ಧಿ ಅಂತ ತಿಳಿಯುತ್ತಿಲ್ಲ. ರಮೇಶ್ ಜಾರಕಿಹೊಳಿ ಮನೆ ಮುಂದಿನ ರಸ್ತೆ ಮಾಡಲು ಐದು ವರ್ಷ ಬೇಕಾಯ್ತು. ಇನ್ನೂ ಅವರ ಮನೆಯ ಮುಂದಿನ ರಸ್ತೆ ಕಾಮಗಾರಿಯೇ ಮುಗಿದಿಲ್ಲ. ಬಿಎಸ್‌ವೈ ಬಿಟ್ರೆ ರಮೇಶ್ ಜಾರಕಿಹೊಳಿಗೆ ಬೇರೆ ಆಪ್ಷನ್ ಇಲ್ಲ. ಬಿಎಸ್‌ವೈ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ರಮೇಶ ಜಾರಕಿಹೊಳಿ ಸೋಲಿಸುವುದೇ ನಮ್ಮ ಗುರಿ. ರಮೇಶ್ ಜಾರಕಿಹೊಳಿ ಗೆದ್ರೆ ಜಲಸಂಪನ್ಮೂಲ ಸಚಿವ, ಡಿಸಿಎಂ, ಉಸ್ತುವಾರಿ ಸಚಿವರು ಹೀಗೆ ಮೂರು ಲಾಭಗಳಾಗುತ್ತೆ ಎಂದು ಪ್ರಚಾರ ಮಾಡಲಾಯಿತು. ಆದರೆ ಇವರು ಉಸ್ತುವಾರಿ ಸಚಿವರಾದ್ರೆ ಜನರಿಗೇನೂ ಲಾಭವಿಲ್ಲ. ಈ ಹಿಂದೆ ಎರಡು ಬಾರಿ ಸಚಿವರಾಗಿದ್ದರಲ್ಲ ಆಗ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.