ಚಿಕ್ಕೋಡಿ : ಬೆಳಗಾವಿ ಲೋಕಸಭಾ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿಯ ಮಂಗಳಾ ಅಂಗಡಿ ಪರ ಪ್ರಚಾರ ಭರ್ಜರಿಯಾಗಿದೆ. ಈ ಕಡೆ ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡಿದ್ದು, ಅವರು ಕೂಡ ಪ್ರಚಾರ ಜೋರಾಗಿಯೇ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ನ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಮಾತ್ರ ಎಲ್ಲೂ ಸತೀಶ್ ಪರ ಪ್ರಚಾರದಲ್ಲಿ ಭಾಗಿಯಾಗಿಲ್ಲ.
ಸುರೇಶ್ ಅಂಗಡಿ ಪತ್ನಿಗೆ ಟಿಕೇಟ್ ನೀಡಿದರೆ ನಾನೇ ಅವರ ಪರ ಮತ ಚಲಾಯಿಸುವೆ ಎಂದಿದ್ದ ಪ್ರಕಾಶ್ ಹುಕ್ಕೇರಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಮತ ಬೇಟೆಗೆ ಇಳಿಯದ ಹುಕ್ಕೇರಿ, ಪರೋಕ್ಷವಾಗಿ ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳುತ್ತಿದ್ದಾರಾ? ಎಂಬುವುದು ಸಾರ್ವಜನಿಕ ವಲಯದ ಪ್ರಶ್ನೆ.
ವೈಯಕ್ತಿಕ ವರ್ಚಸ್ಸಿನ ವ್ಯಕ್ತಿಯಾದ ಪ್ರಕಾಶ್ ಹುಕ್ಕೇರಿ, ಸತೀಶ್ ಪರ ಮತ ಬೇಟೆಗೆ ಇಳಿಯದೆ ಇರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ದಿ.ಸುರೇಶ ಅಂಗಡಿ ಅವರು ನಿಧನದಿಂದ ಬಿಜೆಪಿ ಟಿಕೆಟ್ ಮಂಗಳಾ ಅಂಗಡಿ ಅವರಿಗೆ ನೀಡಬೇಕು. ಬಿಜೆಪಿ ಟಿಕೇಟ್ ನೀಡಿದರೆ ನಾನೂ ಮಂಗಳಾ ಅಂಗಡಿ ಅವರನ್ನು ಬೆಂಬಲಿಸುತ್ತೇನೆ ಎಂದು ಹುಕ್ಕೇರಿ ಹೇಳಿದ್ದರು.
ಈಗ ಬಿಜೆಪಿ ಟಿಕೇಟ್ ಮಂಗಳಾ ಅಂಗಡಿ ಅವರಿಗೆ ನೀಡಿದೆ. ಪ್ರಕಾಶ್ ಹುಕ್ಕೇರಿ ಮಂಗಳಾ ಅಂಗಡಿ ಅವರಿಗೆ ಬೆಂಬಲಿಸುತ್ತಾರಾ? ಇಲ್ಲವೇ ಸ್ವಪಕ್ಷದಲ್ಲಿ ಸ್ಪರ್ಧೆ ಮಾಡಿರುವ ಸತೀಶ್ ಜಾರಕಿಹೊಳಿ ಅವರ ಪರ ಪ್ರಚಾರ ಮಾಡುತ್ತಾರಾ? ಕಾದು ನೋಡಬೇಕಿದೆ.