ಚಿಕ್ಕೋಡಿ : ಕೇಂದ್ರ ಸಚಿವರಾಗಿದ್ದ, ದಿವಂಗತ ಸುರೇಶ್ ಅಂಗಡಿ ಅವರ ಮನೆಯಲ್ಲಿ ಯಾರಿಗಾದ್ರೂ ಟಿಕೆಟ್ ಸಿಕ್ರೇ ತಾವು ಬಿಜೆಪಿ ಪರವಾಗಿಯೇ ಪ್ರಚಾರ ನಡೆಸೋದಾಗಿ ಹೇಳಿದ್ದ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಈಗ ಕಾಂಗ್ರೆಸ್ ಪರವಾಗಿ ಭರ್ಜರಿ ಕ್ಯಾಂಪೇನ್ ಮಾಡ್ತಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕರಲ್ಲೊಬ್ಬರಾದ ಚಿಕ್ಕೋಡಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು, ಮೊನ್ನೆ ಮೊನ್ನೆ ಅಷ್ಟೇ ನಾನು ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ದಿವಂಗತ ಸುರೇಶ್ ಅಂಗಡಿ ಕುಟುಂಬದ ಪರವಾಗಿ ನಿಲ್ಲುತ್ತೇನೆ.
ಅವರ ಕುಟುಂಬದವರಿಗೆ ಟಿಕೆಟ್ ನೀಡಿದ್ರೆ, ನನ್ನ ಮಗನನ್ನು ಗೆಲ್ಲಿಸಿಕೊಂಡು ಬಂದ ಹಾಗೆ ಅವರ ಕುಟುಂಬದ ಸದಸ್ಯರ ಗೆಲುವಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಆದರೆ, ಸದ್ಯ ಗ್ರಾಮ ಪಂಚಾಯತ್ ಚುನಾವಣೆ ನಡೆದಿದ್ದು, ಇಂದು ದಿಢೀರ್ ಯೂಟರ್ನ್ ಹೊಡೆದು ಮತ್ತೆ ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಇವರ ಈ ನಡೆ ಗೊಂದಲ ಸೃಷ್ಟಿಸಿದೆ. ತಮ್ಮ ಮಗ ಗಣೇಶ್ ಹುಕ್ಕೇರಿಯ ರಾಜಕೀಯ ಭವಿಷ್ಯದ ಹಿನ್ನೆಲೆ ಪ್ರಕಾಶ್ ಹುಕ್ಕೇರಿ ಬಿಜೆಪಿ ಪರ ವಾಲಿದ್ದಾರೆ. ಇದೇ ಹಿನ್ನೆಲೆ ಅವರು ಕಮಲ ನಾಯಕರ ಪರ ಹೇಳಿಕೆ ನೀಡುತ್ತಿದ್ದಾರೆ.
ಅವರು ಪಕ್ಷ ತೊರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೂಡ ಸ್ಥಳೀಯವಾಗಿ ಕೇಳಿ ಬಂದಿದ್ದವು. ಆದರೆ, ಈಗ ಮತ್ತೆ ಪ್ರಕಾಶ್ ಹುಕ್ಕೇರಿ ವರಸೆ ಬದಲಾಯಿಸಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ನಾಯಕರನ್ನು ಕರೆಸಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ.
ಇದೇ ಕಾರಣಕ್ಕೆ ಗ್ರಾಮ ಪಂಚಾಯತ್ ಚುನಾವಣೆ ಪ್ರಚಾರಕ್ಕೆ ಬರುವಂತೆ ಮಾಜಿ ಸಚಿವ ಎಂ ಬಿ ಪಾಟೀಲ್ ಅವರನ್ನು ಸ್ವತಃ ಪ್ರಕಾಶ ಹುಕ್ಕೇರಿಯವರೆ ಫೋನ್ ಮಾಡಿ ಕರೆದಿದ್ದಾರೆ. ಈ ಕುರಿತು ಮಾತನಾಡಿದ ಎಂ ಬಿ ಪಾಟೀಲ್ ಅವರು, ಪ್ರಕಾಶ್ ಹುಕ್ಕೇರಿ ನಮಗೆ ಫೋನ್ ಮಾಡಿ, ಚಿಕ್ಕೋಡಿ ಸದಲಗಾ ಕಾರ್ಯಕರ್ತರ ಸಭೆ ಆಯೋಜನೆ ಮಾಡಿದ್ದು, ನೀವು ಬರಲೇಬೇಕು ಎಂದು ಒತ್ತಾಯಿಸಿದ ಹಿನ್ನೆಲೆ ಸಭೆಗೆ ಬಂದಿದ್ದೇವೆ ಎಂದು ತಿಳಿಸಿದರು.
ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿರುವ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಈಗ ಮತ್ತೆ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದು, ಅವರನ್ನ ನಂಬಿರುವ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ.