ಬೆಳಗಾವಿ: ಕಳೆದ ಒಂದೂವರೆ ವರ್ಷದ ಹಿಂದೆ ಜಿಲ್ಲೆಯಲ್ಲಿ ಉಂಟಾದ ಜಲ ಪ್ರಳಯದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಅದರಲ್ಲಿ ಹಲವಾರು ಸಂತ್ರಸ್ತರು ಇಂದಿಗೂ ಸರ್ಕಾರದ ಪರಿಹಾರ ಸಿಗದೇ ಬೀದಿಯಲ್ಲಿ ಬದುಕುವಂತಾಗಿದ್ದು, ಕೂಡಲೇ ನೆರೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಒಂದೂವರೆ ವರ್ಷದ ಹಿಂದೆ ಉಂಟಾದ ಜಲ ಪ್ರಳಯದಲ್ಲಿ ಹಲವಾರು ರೈತರು ತಮ್ಮ, ಜಮೀನು ಕಳೆದುಕೊಂಡು ಕಂಗಾಲಾಗಿದ್ದರು. ಈ ಸಂದರ್ಭದಲ್ಲಿ ಸರ್ಕಾರ ಪರಿಹಾರದ ಭರವಸೆಯನ್ನು ನೀಡಿದ್ದು, ಜಿಪಿಎಸ್ ಮಾಡುವ ಮೂಲಕ ಮನೆ ಕಟ್ಟಿಕೊಳ್ಳಲು ಹಣವನ್ನು ಬಿಡುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಒಂದೇ ಮನೆಯಲ್ಲಿ ಎರಡ್ಮೂರು ಕುಟುಂಬಗಳು ವಾಸ ಮಾಡುತ್ತವೆ. ಜಿಪಿಎಸ್ ಮಾಡುವುದರಿಂದ ಸಾಕಷ್ಟು ಜನರು ತೊಂದರೆಗೊಳಗಾಗುತ್ತಾರೆ ಎಂದರೂ ಸರ್ಕಾರ ಇದಕ್ಕೆ ಸ್ಪಂದಿಸಿರಲಿಲ್ಲ. ಹೀಗಾಗಿ ಪ್ರವಾಹ ಸಂಭವಿಸಿ ಒಂದೂವರೆ ವರ್ಷ ಕಳೆದರೂ ಸಾವಿರಾರು ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ದಾಖಲೆಗಳನ್ನು ಹಿಡಿದುಕೊಂಡು ಕಚೇರಿಯಿಂದ ಕಚೇರಿಗೆ ಅಲೆದರು ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಇದರಿಂದಾಗಿ ಸಾವಿರಾರು ಜನರು ಬೀದಿಯಲ್ಲಿ ಬದುಕುವಂತಾಗಿದೆ.
ರಾಮದುರ್ಗ ತಾಲೂಕಿನ ಅವರಾದಿ, ಹಿರೇಹಂಪಿಹೋಳಿ, ಚಿಕ್ಕ ಹಂಪಿಹೋಳಿ, ಸುರೇಬಾನ್ ಸೇರಿದಂತೆ ಹತ್ತಕ್ಕೂ ಅಧಿಕ ಗ್ರಾಮದ ನೆರೆ ಸಂತ್ರಸ್ತರ ಪೈಕಿ ಬಹುತೇಕರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳು ಮತ್ತು ಸರ್ಕಾರದ ಧೋರಣೆ ಖಂಡಿಸಿ ಕಳೆದ ಎರಡು ತಿಂಗಳ ಹಿಂದೆ ನೂರಾರು ನೆರೆ ಸಂತ್ರಸ್ತರು ರಾಮದುರ್ಗ ಪಟ್ಟಣದಲ್ಲಿರುವ ತಹಶಿಲ್ದಾರ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, 15 ದಿನಗಳಲ್ಲಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಆದರೆ, ಭರವಸೆ ನೀಡಿ ಎರಡು ತಿಂಗಳು ಕಳೆದರೂ ಪರಿಹಾರ ನೀಡುವ ಕುರಿತು ಅಧಿಕಾರಿಗಳು ಧ್ವನಿ ಎತ್ತುತ್ತಿಲ್ಲ. ಇದರಿಂದ ಆಕ್ರೋಶಗೊಂಡ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.