ಬೆಳಗಾವಿ: ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ರಸ್ತೆ ಮತ್ತು ಸೇತುವೆಗಳ ಸಂಪರ್ಕಗಳನ್ನು ಆದಷ್ಟು ಬೇಗನೆ ಸರಿಪಡಿಸಬೇಕೆಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ ಅತೀಕ್ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಪ್ರವಾಹದಲ್ಲಿ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ 2023 ಕಿ.ಮೀ ರಸ್ತೆ ಹಾಗೂ 93 ಸೇತುವೆಗಳು, 177 ಗ್ರಾಮ ಪಂಚಾಯಿತಿ ಕಟ್ಟಡಗಳು ಶಿಥಿಲಗೊಂಡಿವೆ. ಕುಡಿಯುವ ನೀರಿಗೆ ಆಹಾಕಾರ ಎದುರಿಸುತ್ತಿರುವ 21 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯ ಬಳಿಕ ಎಲ್.ಕೆ ಅತೀಕ್, ಕಾಕತಿಯ ಬಹುಗ್ರಾಮ ಕುಡಿಯುವ ನೀರಿನ ಘಟಕ, ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಘಟಕ, ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಕುಡಿಯುವ ನೀರಿನ ಘಟಕ, ಜೂಗೂಳ ಗ್ರಾಮದ ಶಾಹಾಪೂರ ರಸ್ತೆ, ಕುಡಿಯುವ ನೀರಿನ ಜಾಕ್ ವೆಲ್, ಗ್ರಾಮ ಪಂಚಾಯತ್ ಕಟ್ಟಡ, ಮಂಗಾವತಿ ಗ್ರಾಮದ ಶಾಲಾ ಕಟ್ಟಡ, ದವಾಖಾನೆ ಕಟ್ಟಡ, ಅಂಗನವಾಡಿ ಕಟ್ಟಡ ಹಾಗೂ ಅಥಣಿ ತಾಲೂಕಿನ ಹಲ್ಯಾಳ ಅವರಖೋಡ ರಸ್ತೆ ವೀಕ್ಷಣೆ ಮಾಡಿದರು.