ಬೆಳಗಾವಿ: ಮತಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಮುಚ್ಚಂಡಿ ಗ್ರಾಮದ ಸರ್ಕಾರಿ ಕನ್ನಡ ಹಾಗೂ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಎಲ್ಲಾ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಸರ್ಕಾರದ ಅನುದಾನದಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.
90 ಲಕ್ಷ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ:
ಗ್ರಾಮದ ಸರ್ಕಾರಿ ಕನ್ನಡ ಹಾಗೂ ಮರಾಠಿ ಶಾಲೆಯಲ್ಲಿ ಇಂದು 90 ಲಕ್ಷ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಅನುದಾನದಲ್ಲಿ ಶೌಚಾಲಯ, ಶಾಲಾ ಕೊಠಡಿ, ಆಟದ ಮೈದಾನ ನಿರ್ಮಾಣ ಸೇರಿ ವಿವಿಧ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಗ್ರಾಮಸ್ಥರ ಕೋರಿಕೆಯಂತೆ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಬೀದಿದೀಪ ಅಳವಡಿಕೆ ಸೇರಿ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮನೆಗಳ ಮಂಜೂರಾತಿಗೆ ಸರ್ಕಾರದ ಮೇಲೆ ಒತ್ತಡ:
ಕಳೆದ ಮೂರು ವರ್ಷಗಳಿಂದ ಕ್ಷೇತ್ರಕ್ಕೆ ಯಾವುದೇ ಹೊಸ ಮನೆಗಳು ಬಿಡುಗಡೆಯಾಗಿಲ್ಲ. ಹಳೆಯ ಮನೆಗಳ ಬಾಕಿ ಬಿಲ್ ಕೂಡ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಆದರೆ ನಾವು ಮನೆಗಳನ್ನು ಮಂಜೂರು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಮನೆಗಳು ಮಂಜೂರಾದರೆ ಅವುಗಳನ್ನು ಅರ್ಹರಿಗೆ ಹಂಚಿಕೆ ಮಾಡಲಾಗುವುದು ಎಂದರು.
ಇದನ್ನೂ ಓದಿ: ನಾನು ದಲಿತರ ಬಗ್ಗೆ ಎಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿಲ್ಲ: ಸಿದ್ದರಾಮಯ್ಯ