ಬೆಳಗಾವಿ: ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಚಾಕು ಇರಿತ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮತ್ತು ಅವರ ಇಬ್ಬರು ಆಪ್ತರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 1860(U/s 143, 147, 148, 323, 324, 379, 504, 506), ಅಟ್ರಾಸಿಟಿ ಕೇಸ್ ಮತ್ತು ಐಪಿಸಿ ಸೆಕ್ಷನ್ 1989(u/s-3(1), (r)(s), 3(2)(v-a), IPC 1860(u/s-149ರಡಿ ಕೇಸ್ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, ಆಪ್ತ ಸುಜಿತ್ ಜಾಧವ್, ಸದ್ದಾಂ ವಿರುದ್ಧ ಪ್ರಕರಣ ದಾಖಲಾಗಿದೆ.
ಪೃಥ್ವಿ ಸಿಂಗ್ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಪೃಥ್ವಿ ಸಿಂಗ್ ಪುತ್ರ ಜಸ್ವೀರ್ ಸಿಂಗ್ ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಬಿಜೆಪಿ ಕಾರ್ಯಕರ್ತನ ಮೇಲೆ ಸೋಮವಾರ ಕೆಲವರು ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಜಯನಗರದ ಪೃಥ್ವಿ ಸಿಂಗ್ ಅವರ ಮನೆ ಮುಂದೆ ಐದಾರು ಜನರು ಏಕಾಏಕಿ ಬಂದು, ಹೊರಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪೃಥ್ವಿ ಸಿಂಗ್ ಅವರು ಕೆಲವರ ಜೊತೆಗೆ ಮಾತನಾಡುತ್ತಿರುವುದು ಅವರ ಮನೆ ಬಳಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಘಟನೆಯಲ್ಲಿ ಗಾಯಗೊಂಡ ತಕ್ಷಣ ಪೃಥ್ವಿ ಸಿಂಗ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಹಾಗೂ ಬೆಂಬಲಿಗರೇ ಈ ಘಟನೆಗೆ ಕಾರಣ ಎಂದು ಹಲ್ಲೆಗೊಳಗಾದ ಪೃಥ್ವಿ ಸಿಂಗ್ ಹಾಗೂ ಅವರ ಮಗ ಜಸ್ವೀರ್ ಸಿಂಗ್ ಆರೋಪ ಮಾಡಿದ್ದರು.
ಇದನ್ನೂ ಓದಿ: ರಮೇಶ ಜಾರಕಿಹೊಳಿ ಆಪ್ತನ ಮೇಲೆ ಹಲ್ಲೆ ಪ್ರಕರಣ: ಕೂಲಂಕಷ ತನಿಖೆ ಆಗಲಿ ಎಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಗೃಹ ಸಚಿವರ ಹೇಳಿಕೆ: ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಈ ಕುರಿತು ಪೊಲೀಸರು ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಆಧರಿಸಿ ಮಾಹಿತಿ ನೀಡಲು ಸೂಚಿಸಲಾಗಿದೆ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಪೊಲೀಸರು ನನ್ನನ್ನು ಬಂಧಿಸಲು ಬಂದರೆ ಅವರಿಗೆ ಸಹಕಾರ ಕೊಡುತ್ತೇನೆ: ಚನ್ನರಾಜ ಹಟ್ಟಿಹೊಳಿ