ಬೆಳಗಾವಿ: ಜಿಲ್ಲೆಯ ವಿವಿಧೆಡೆ ಮಳೆಗಾಗಿ ನಾನಾ ರೀತಿಯ ಪೂಜೆ ಮಾಡಿದರೂ ಜನರ ಪ್ರಾರ್ಥನೆಗೆ ಮಳೆರಾಯ ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ. ಆದರೂ ನಂಬಿಕೆ ಕಳೆದುಕೊಳ್ಳದ ರೈತರು ತಮ್ಮ ಕೃಷಿ ಚಟುವಟಿಕೆ ಮುಂದುವರಿಸಿದ್ದಾರೆ. ಒಣ ಹೊಲದಲ್ಲಿ ಕೈಯಿಂದಲೇ ಸಾಲು ಬಿಡುತ್ತಾ ಭತ್ತದ ಬಿತ್ತನೆ ಮಾಡುತ್ತಿದ್ದಾರೆ.
ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದ ಮಾಣಿಕವಾಡಿ ಗ್ರಾಮದ ಕೃಷ್ಣಾ ಗಾವಡಾ ಎಂಬುವವರ ಅರ್ಧ ಎಕರೆ ಜಮೀನು ಹೊಂದಿದ್ದು, ತಮ್ಮ ಪತ್ನಿ ಅನುರಾಧಾ ಜೊತೆಗೆ ಭತ್ತದ ಬಿತ್ತನೆಯಲ್ಲಿ ತೊಡಗಿದ್ದಾರೆ. ಈ ವೇಳೆ ಈಟಿವಿ ಭಾರತದೊಂದಿಗೆ ತಮ್ಮ ಸಂಕಷ್ಟ ಹೇಳಿಕೊಂಡ ರೈತ ಮಹಿಳೆ ಅನುರಾಧಾ ಗಾವಡಾ, ಮಳೆ ಆಗುತ್ತೆ ಎಂಬ ನಂಬಿಕೆಯಲ್ಲಿ ಭತ್ತ ಬಿತ್ತುತ್ತಿದ್ದೇವೆ. ಮಳೆ ಆಗದಿದ್ದರೆ ಹಾನಿಯಾಗಿ ನಷ್ಟವಾಗುತ್ತದೆ. ಅರ್ಧ ಎಕರೆ ಮಾತ್ರ ನಮ್ಮದು ಹೊಲ ಇರೋದರಿಂದ ಎತ್ತುಗಳು ಇಲ್ಲ. ಎತ್ತು ಇಲ್ಲದೇ ಇರುವುದಿರಂದ ನಮ್ಮ ಪತಿ ಕೈಯಿಂದಲೇ ಸಾಲು ಬಿಡುತ್ತಿದ್ದಾರೆ. ಹಿಂದಿನಿಂದ ನಾನು ಭತ್ತ ಬಿತ್ತುತ್ತಿದ್ದೇನೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ರೈತ ಮಹಿಳೆ, ಸರ್ಕಾರ ಏನೋ ಅಷ್ಟೋ ಇಷ್ಟು ಪರಿಹಾರ ನೀಡುತ್ತದೆ. ಆದರೆ, ಆ ಪರಿಹಾರ ಮಾತ್ರ ನಮ್ಮ ಕೈಗೆ ಬಂದು ತಲುಪುವುದಿಲ್ಲ. ಪುಡಾರಿಗಳು, ದೊಡ್ಡ ಮಂದಿಗೆ ಪರಿಹಾರ ಹೋಗುತ್ತದೆ. ಹೀಗಾಗಿ ಮಳೆಯಾಗದೇ ನಮ್ಮ ಬೆಳೆ ಹಾನಿಯಾದರೆ ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡಬೇಕು. ದೇವರ ದಯೆಯಿಂದ ಮಳೆಯಾದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.
ಭತ್ತವನ್ನೆ ಹೆಚ್ಚಾಗಿ ಬೆಳೆಯುವ ಖಾನಾಪುರ ತಾಲೂಕಿನ ರೈತರು ಮಳೆಯನ್ನೆ ನಂಬಿ ತಮ್ಮ ಕೃಷಿ ಮಾಡುತ್ತಾರೆ. ಮಲಪ್ರಭಾ ನದಿ, ಮಹದಾಯಿ, ಕಳಸಾ ಬಂಡೂರಿ ನಾಲಾ ಸೇರಿ ಸಾಕಷ್ಟು ಜಲಮೂಲ ಹೊಂದಿದ್ದರೂ ಮಳೆಯನ್ನೆ ನೆಚ್ಚಿಕೊಂಡಿರುವ ರೈತರು ಈ ಬಾರಿ ಸಕಾಲಕ್ಕೆ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ಹಾನಿ ಭೀತಿ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: ಕೈ ಕೊಟ್ಟ ಮಳೆ, ಭುವಿಯಲ್ಲೇ ಕರಗಿ ಹೋಗ್ತಿವೆ ಬಿತ್ತನೆ ಬೀಜಗಳು: ಚಿಕ್ಕಮಗಳೂರು ರೈತರ ಬವಣೆ
ಈ ಬಗ್ಗೆ ಸ್ಥಳೀಯ ಪ್ರಸನ್ನ ಕುಲಕರ್ಣಿ ಎಂಬುವವರು ಮಾತನಾಡಿ, ಬಹುತೇಕ ಅರಣ್ಯ ಪ್ರದೇಶ ಹೊಂದಿರುವ ಖಾನಾಪುರ ತಾಲೂಕಿನಲ್ಲಿ ಮೇ ತಿಂಗಳು ಕೊನೆಯ ವಾರ ಇಲ್ಲವೇ ಜೂನ್ ತಿಂಗಳು ಮೊದಲ ವಾರ ಮಳೆರಾಯನ ಆಗಮನವಾಗುತ್ತಿತ್ತು. ಆದರೆ ಈ ವರ್ಷ ಜೂನ್ ತಿಂಗಳ ಮೂರನೇ ವಾರ ಮುಗಿಯುತ್ತಾ ಬಂದರೂ ಮಳೆಯಾಗಿಲ್ಲ. ಈ ಬಾರಿ ಬರಲಗಾದ ಛಾಯೆ ಆವರಿಸಿದೆ. ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಭೂಮಿ ಹಸಿಯಾಗಿದ್ದರಿಂದ ಇಲ್ಲಿನ ರೈತರು ಭತ್ತವನ್ನು ಬಿತ್ತಿದ್ದರು.
ಈಗ ಭತ್ತ ಚಿಗುರೊಡೆದಿದ್ದು, ಮಳೆಗಾಗಿ ರೈತರು ಎದುರು ನೋಡುತ್ತಿದ್ದಾರೆ. ಸಕಾಲಕ್ಕೆ ಮಳೆಯಾದರೆ ರೈತರಿಗೆ ಉತ್ತಮ ಫಸಲು ಬರುತ್ತದೆ. ಇಲ್ಲದಿದ್ದರೆ ಬಹಳಷ್ಟು ಹಾನಿಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಇದನ್ನೂ ಓದಿ: ಮಳೆಯಿಲ್ಲದೇ ಬತ್ತಿದ ಕೆರೆಗೆ ಕೊಳವೆ ಬಾವಿಯಿಂದ ನೀರು ಹರಿಸಿ ಪ್ರಾಣಿಪಕ್ಷಿಗಳ ನೀರಿನ ದಾಹ ತೀರಿಸುತ್ತಿರುವ ರೈತ