ಚಿಕ್ಕೋಡಿ: ಗಂಗಾಕಲ್ಯಾಣ ಯೋಜನೆಯಡಿ ನೀರು ಪೂರೈಸುವ ಕಾಮಗಾರಿಯಲ್ಲಿ ಅಧಿಕಾರಿಗಳು ಗೋಲ್ಮಾಲ್ ಮಾಡಿದ್ದಾರೆ ಎಂಬ ಆರೋಪ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಕೇಳಿಬಂದಿದೆ.
ಬೂದಿಹಾಳ ಗ್ರಾಮದ ಹಿಂದುಳಿದ ಸಮುದಾಯದವರ 45 ಎಕರೆ ಪ್ರದೇಶದ ರೈತರಿಗೆ, ಗಂಗಾಕಲ್ಯಾಣ ಯೋಜನೆಯಡಿಯಲ್ಲಿ 3.2 ಕಿ.ಮೀ ದೂರದಲ್ಲಿರುವ ವೇದಗಂಗಾ ನದಿ ಮೂಲಕ ಸುಮಾರು 30 ಲಕ್ಷ ವೆಚ್ಚದಲ್ಲಿ ನೀರು ಪೂರೈಸುವ ಯೋಜನೆಗೆ ಸರ್ಕಾರ ಅನುಮತಿ ನೀಡಿತ್ತು. ಕಾಮಗಾರಿ ಪ್ರಾರಂಭಿಸಿದ ಅಧಿಕಾರಿಗಳು ಏಕಾಏಕಿ 500 ಮೀಟರ್ ಕಾಮಗಾರಿ ಕೆಲಸ ಮಾಡಿ, ಬಳಿಕ 1 ಕಿ.ಮೀ ದೂರದಲ್ಲಿರುವ ಚುಕುತ್ರಾ ಹಳ್ಳದ ಮೂಲಕ ಪೈಪ್ಲೈನ್ ಹಾಕಿ ನೀರು ಪೂರೈಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಯೋಜನೆಯಲ್ಲಿ ನಿಗದಿಪಡಿಸಿದ ಜಾಗವನ್ನು ಬಿಟ್ಟು ಬೇರೆ ಕಡೆಯಿಂದ ನೀರು ಪೂರೈಸುವ ಕಾರ್ಯ ಯಾಕೆ ಎಂಬುದು ಜನರ ಪ್ರಶ್ನೆಯಾಗಿದೆ. ಯೋಜನೆಯಲ್ಲಿ ವೇದಗಂಗಾ ನದಿಯಿಂದ ನೀರನ್ನು ಪೂರೈಸುವ ಸರ್ಕಾರಿ ಆದೇಶ ಮೀರಿ ಸಮೀಪದ ಚುಕುತ್ರಾ ಹಳ್ಳದಿಂದ ನೀರು ಲಿಫ್ಟ್ ಮಾಡಲು ಮುಂದಾದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನೀರಾವರಿ ಅಧಿಕಾರಿ ಅಶೋಕ ಪೂಜಾರಿ ಪ್ರತಿಕ್ರಿಯಿಸಿದ್ದು, 3.2 ಕಿಲೋಮೀಟರ್ ದೂರದ ಯೋಜನೆಯನ್ನೇ ನಾವು ಮಾಡುತ್ತಿದ್ದೆವು. ಆದರೆ, ಕೆಲ ಗದ್ದೆಗಳಲ್ಲಿ ಬೆಳೆ ಇದ್ದ ಕಾರಣ ನಮಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ನಾವು ಪಕ್ಕದ ಹಳ್ಳದಿಂದ ಕಾಮಗಾರಿ ಮಾಡಲು ಮುಂದಾಗಿದ್ದೇವೆ. ಬೇಡ ಅಂದ್ರೆ ವಾಪಸ್ ವೇದಗಂಗಾ ನದಿಯಿಂದ ಕಾಮಗಾರಿ ಮಾಡುತ್ತೇವೆ ಎಂದಿದ್ದಾರೆ.